ಮಹಾಕುಂಭಮೇಳಕ್ಕೆ ಎಐ, ಡಿಜಿಟಲ್‌ ಸ್ಪರ್ಶ

ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌, ಸಾರಿಗೆ ಎಲ್ಲದಕ್ಕೂ ಆಧುನಿಕ ತಂತ್ರಜ್ಞಾನ ಬಳಕೆ

ಪ್ರಯಾಗ್‌ರಾಜ್‌ : ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ನಗರ ಸಜ್ಜಾಗುತ್ತಿದೆ. ಉತ್ತರ ಪ್ರದೇಶ ಸರಕಾರ ಕಳೆದ ಐದಾರು ತಿಂಗಳಿನಿಂದಲೇ ಕುಂಭಮೇಳಕ್ಕಾಗಿ ತಯಾರಿ ನಡೆಸುತ್ತಿದ್ದು, ಈ ಸಲದ ಕುಂಭಮೇಳ ಸಂಪೂರ್ಣವಾಗಿ ಡಿಜಿಟಲ್‌ ತಂತ್ರಜ್ಞಾನದ ಸ್ಪರ್ಶದೊಂದಿಗೆ ನಡೆಯುತ್ತಿರುವುದು ವಿಶೇಷ. ಭಕ್ತರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸೌಲಭ್ಯ ಕಲ್ಪಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌… ಹೀಗೆ ಪ್ರತಿಯೊಂದನ್ನು ಕೂಡ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಗೊಳಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕುಂಭಮೇಳದ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿದೆ. ಹಿಂದೂ ಧರ್ಮದ ಅತ್ಯಂತ ಮಹತ್ವದ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ನಿರಂತರ ಒಂದೂವರೆ ತಿಂಗಳು ಪ್ರಯಾಗ್‌ರಾಜ್‌ಗೆ ವಿಶ್ವದೆಲ್ಲೆಡೆಯಿಂದ ಜನಸಾಗರವೇ ಹರಿದುಬರಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಸಕಲ ಸಿದ್ಧತೆಗಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

































 
 

ಮಹಾಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿದೀರ್ಘ ಮತ್ತು ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ. ಈ ಸಲದ ಕುಂಭಮೇಳಕ್ಕಾಗಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ತಾಲೂಕುಗಳನ್ನು ಒಳಗೊಂಡ ‘ಮಹಾಕುಂಭ ನಗರವನ್ನು’ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಜ.14ರಿಂದ ಫೆ.26ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೇಳುವುದೇ ಕುಂಭಮೇಳ. 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ನಲ್ಲಿ ಮಹಾಕುಂಭಮೇಳ ನಡೆಸಲಾಗುತ್ತದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯಲಿದೆ.

ಎಐ ಸಿಸಿಟಿವಿ ಅಳವಡಿಕೆ

ಮಹಾಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಬಹುತೇಕ ಯಾತ್ರಿಕರು ಮುಂಜಾನೆ 3ರಿಂದ ಬೆಳಗ್ಗೆ 7ರವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ ಎಐ ಆಧಾರಿತ ಸಿಸಿ ಕ್ಯಾಮರಾಗಳು ಇದೇ ಸಮಯದಲ್ಲಿ ಭಕ್ತರ ಸಂಖ್ಯೆ ಲೆಕ್ಕ ಹಾಕಿ ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ. ಶೇ.95 ನಿಖರತೆಯನ್ನು ಇದು ಸಾಧಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಪ್ರಯಾಗ್‌ರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ.

ಗೂಗಲ್‌ನಿಂದ ನ್ಯಾವಿಗೇಷನ್ ಸಿಸ್ಟಮ್

ಮಹಾಕುಂಭಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ತಾತ್ಕಾಲಿಕ ನಗರಕ್ಕೆ ನ್ಯಾವಿಗೇಷನ್ ಸಿಸ್ಟಮ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಅಥವಾ ಭಕ್ತರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಐಷಾರಾಮಿ ಟೆಂಟ್ ಸಿಟಿ

ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ-ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್‌ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಚಾಟ್‌ಬಾಟ್ ಮಾಹಿತಿ

ಪ್ರಯಾಣಿಕರಿಗೆ ನೆರವು ನೀಡುವುದಕ್ಕಾಗಿ ಕೃತಕ ಬುದ್ಧಿಮತ್ತೆ ಚಾಟ್‌ಬಾಟನ್ನು ಸ್ಥಾಪನೆ ಮಾಡಿದೆ. ಈ ಚಾಟ್‌ಬಾಟ್ ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇದೊಂದು ಆ್ಯಪ್ ಆಗಿದ್ದು, ‘ಓಲಾ ಕೃತಿಮ್’ ಇದನ್ನು ತಯಾರು ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳ, ಉರ್ದು, ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿಗಳಲ್ಲಿ ಇದು ಮಾಹಿತಿ ಒದಗಿಸಲಿದೆ. ಅಲ್ಲದೇ ಇಡೀ ಕುಂಭಮೇಳದ ಮ್ಯಾಪ್ ಒದಗಿಸಲಿದ್ದು, ಕುಂಭಮೇಳದ ಇತಿಹಾಸ, ಪದ್ಧತಿ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.

5 ಲಕ್ಷ ವಾಹನಗಳಿಗೆ ಪಾರ್ಕಿಂಗ್‌

ಒಟ್ಟು 101 ಪಾರ್ಕಿಂಗ್ ಸೈಟ್‌ಗಳನ್ನು ಗುರುತಿಸಲಾಗಿದ್ದು, 5 ಲಕ್ಷ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುತ್ತದೆ. ದೊಡ್ಡ ವಾಹನಗಳಿಗೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಮಹಾ ಕುಂಭದ ಸಮಯದಲ್ಲಿ 550 ಶಟಲ್ ಬಸ್ಸುಗಳು ಹಾಗೂ 20,000 ಇ-ರಿಕ್ಷಾಗಳು ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸಲಿವೆ. ಕುಂಭಮೇಳ ನಡೆಯುವ ಪ್ರದೇಶದಲ್ಲಿ 100 ಡಿಜಿಟಲ್ ಬೋರ್ಡ್ ಹಾಗೂ 80 ವಿಎಂಡಿ ಅಳವಡಿಸಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಸಂಚಾರ ಮಾರ್ಗ ಮತ್ತು ಪಾರ್ಕಿಂಗ್ ಸ್ಥಿತಿಯ ವಿವರಗಳನ್ನು ಸಿಗುತ್ತದೆ.

ಭದ್ರತೆ

ಮಹಾಕುಂಭದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಮಹಾ ಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಸ್ಥಳಾವಾಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಮತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top