ಪುತ್ತೂರು: ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ.
ಗುಂಡ್ಯ ಭಾಗದಲ್ಲಿ ಅರಣ್ಯ ಇಲಾಖೆ ನರ್ಸರಿಗಳನ್ನು ಕಾಡಾನೆಗಳು ಹಾಳು ಗೆಡವಿದೆ ಎನ್ನುವ ಮಾಹಿತಿ ಲಭಿಸಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಕೇಂದ್ರಿಕರಿಸಲಾಗಿದೆ. ಮೊದಲಿಗೆ ಆನೆಗಳ ಪತ್ತೆ ಕಾರ್ಯ ನಡೆದ ಬಳಿಕವಷ್ಟೇ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಒಟ್ಟು 5 ಆನೆಗಳ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯ ಜೊತೆ ಕಳುಹಿಸಲಾಗಿದೆ. ಉಳಿದಂತೆ 3 ಆನೆಗಳನ್ನು ನೆಟ್ಟಾರು ಬಳಿಯ ಕ್ಯಾಂಪ್‍ನಲ್ಲಿ ಉಳಿಸಲಾಗಿದೆ. ಗುಂಡ್ಯ ಅಥವಾ ಇನ್ನಾವುದೇ ಭಾಗದಲ್ಲಿ ಕಾಡಾನೆಗಳು ಪತ್ತೆಯಾದರೆ, ಅವಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ, ಬಳಿಕ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.
7 ಮಂದಿ ಸೆರೆ
ಗುರುವಾರ ರಾತ್ರಿ ಕಾಡಾನೆಯನ್ನು ಸೆರೆ ಹಿಡಿದು, ಲಾರಿಗೆ ಹತ್ತಿಸುವ ವೇಳೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 7 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಕಾಡಾನೆಯನ್ನು ಕೊಂಡೊಯ್ಯುವ ವೇಳೆಯಲ್ಲಿ, ಉಪಟಳ ನೀಡುವ ಎಲ್ಲಾ ಆನೆಗಳನ್ನು ಸೆರೆ ಹಿಡಿದ ಬಳಿಕವೇ ಸ್ಥಳದಿಂದ ತೆರಳುವಂತೆ ಸ್ಥಳೀಯರು ಪಟ್ಟು ಹಿಡಿದರು. ಈ ಸಂದರ್ಭ ವಾಗ್ವಾದ ನಡೆದು, ಸಿಬ್ಬಂದಿಗಳ ವಿರುದ್ಧವೇ ಸ್ಥಳೀಯರು ತಿರುಗಿ ಬೀಳುವಂತಾಯಿತು. ಆಗ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 7 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಉಮೇಶ್, ರಾಜೇಶ್ ಕನ್ನಡ್ಕ, ಜನಾರ್ಧನ್ ರೈ, ಕೋಕಿಲ ನಂದ, ತೀರ್ಥಕುಮಾರ, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.