ಪುತ್ತೂರು : ಪುತ್ತೂರು ಕಬಕ ಗ್ರಾಮದ ಮುರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ ಮುರ ಸಂಪರ್ಕವಿರುವ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಸರಾಸರಿಯಾಗಿ ಅಪಘಾತಗಳು ಸಂಭವಿಸುವುದರಿಂದ ಅನೇಕ ಸಾವು ನೋವುಗಳು ಉಂಟಾಗಿದೆ. ಜನರು ಭಯಭೀತರಾಗಿ ರಸ್ತೆಯನ್ನು ಉಪಯೋಗಿಸುವಂತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ಸ್ಥಳದಲ್ಲಿ ಡಿ.19 ರಂದು ಮಧ್ಯಾಹ್ನ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ನೂರಾರು ಜನರು ಗುರುವಾರ ಸಂಜೆ 5:30ಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಮುರ ಜಂಕ್ಷನ್ ಬಳಿ “ಮುರ ನಾಗರಿಕ ಒಕ್ಕೂಟದ ವತಿಯಿಂದ ದಿಢೀರ್ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಮತ್ತು ನೋವನ್ನು ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಮ್ಮ ಜೀವ ಮತ್ತು ಜೀವನಕ್ಕೆ ಭದ್ರತೆ ನೀಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ಸಮಯದಲ್ಲಿ ಕೆಲವು ಪ್ರತಿಭಟನಾ ನಿರತ ನಾರ್ವಜನಿಕರಿಂದ ತೀವ್ರ ಆಕ್ರೋಶ ಮತ್ತು ತರಾಟೆಗೆ ಅಧಿಕಾರಿಗಳು ಒಳಗಾದರು.
ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ಸರ್ಕಲ್ ಇನ್ಸೆಕ್ಟರ್ ರವರ ಮುಖಾಂತರ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರಿಂದ ಅಧಿಕಾರಿಗಳು ಮನವಿ ಸ್ವೀಕರಿಸಿ, ಪ್ರತಿಭಟನೆಗೆ ಸೇರಿದವರಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಹೇಳಿ ಮನವೊಲಿಸಲಾಗಿದೆ.
ಈ ಸಮಯದಲ್ಲಿ ಪುತ್ತೂರು ಸರ್ಕಲ್ ಇನ್ಸೆಕ್ಟರ್ ಜಾನ್ಸನ್ ಡಿಸೋಜಾ, ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಉದಯ ರವಿ ಹಾಗೂ ಸಿಬ್ಬಂದಿಗಳು ಮತ್ತು ನೂರಾರು ಮಂದಿ ಪ್ರತಿಭಟನಾಕಾರರು ಉಪಸ್ಥಿತರಿದ್ದರು.