ರಾತ್ರಿಯಿಡೀ ಬೆಳಗಾವಿಯಲ್ಲಿ ಹೈಡ್ರಾಮಾ : ಇಂದು ಬೆಂಗಳೂರಿನ ಕೋರ್ಟ್‌ಗೆ ಸಿ.ಟಿ.ರವಿ ಹಾಜರು

ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕೊಲೆ ಸಂಚು ದೂರು-ಠಾಣೆಯಿಂದ ಠಾಣೆಗೆ ಕರೆದೊಯ್ದ ಪೊಲೀಸರು

ಬೆಳಗಾವಿ: ನಿನ್ನೆ ಸಂಸತ್‌ನಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸಂಸದರ ನಡುವೆ ನಡೆದ ಜಟಾಜಟಿ ಮಾದರಿಯಲ್ಲೇ ರಾಜ್ಯದಲ್ಲೂ ಹೈಡ್ರಾಮಾ ನಡೆದಿದ್ದು, ಬೆಳಗಾವಿಯಲ್ಲಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಠಾಣೆಯಿಂದ ಠಾಣೆಗೆ ಶಿಫ್ಟ್‌ ಮಾಡಲಾಗಿದೆ. ನಂತರ ಗುರುವಾರ ರಾತ್ರಿಯೇ ಬಿಗಿ ಭದ್ರತೆಯಲ್ಲಿ ಅವರನ್ನು ಖಾನಾಪುರ ಠಾಣೆಯಿಂದ ಬೆಂಗಳೂರಿಗೆ ಬಿಗಿಭದ್ರತೆಯಲ್ಲಿ ಕರೆತರಲಾಗಿದ್ದು, ಇಂದು ಸಂಜೆಯೊಳಗೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್​​​ಗೆ ಸಿ‌ಟಿ‌ ರವಿಯನ್ನು ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ನಡುವಣ ಜಟಾಪಟಿ ವಿಕೋಪಕ್ಕೆ ತಿರುಗಿ ಸಚಿವೆ ಮಾಡಿರುವ ಗಂಭೀರ ಆರೋಪ ಒಂದೆಡೆಯಾದರೆ, ಇದೀಗ ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಸಂಚು ಹೂಡಲಾಗಿದೆ ಎಂದು ಆರೋಪಿಸಿ ಸಿ.ಟಿ ರವಿ ಪ್ರತಿ ದೂರು ನೀಡಿದ್ದಾರೆ.































 
 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ ರವಿ ವಿರುದ್ಧ ಗುರುವಾರ ದೂರು ದಾಖಲಿಸಿದ್ದರು. ಸಿ.ಟಿ ರವಿ ತಮ್ಮ ಕಡೆಗೆ ನುಗ್ಗಿ ಬಂದು 10 ಬಾರಿ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಅಶ್ಲೀಲವಾಗಿ ಸನ್ನೆ ಮಾಡಿ, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಸುವರ್ಣಸೌಧದಲ್ಲಿ ಧರಣಿ ಕುಳಿತಿದ್ದ ಸಿ.ಟಿ ರವಿಯನ್ನು ಹೀರೇಬಾಗೇವಾಡಿ ಪೊಲೀಸರು ಬಲವಂತವಾಗಿ ಹೆಗಲ ಮೇಲೆ ಹೊತ್ತುಕೊಂಡು, ಜೀಪು ಹತ್ತಿಸಿ ಕರೆದೊಯ್ದಿದ್ದರು. ಹೀರೇಬಾಗೇವಾಡಿ ಠಾಣೆಯಲ್ಲಿ ಕೆಲಹೊತ್ತು ಕೂರಿಸಿ ನಂತರ ನಂದಗಢ ಠಾಣೆಗೆ ಕರೆದೊಯ್ದಿದ್ದರು. ಮತ್ತೆ ಅಲ್ಲಿಂದ ಖಾನಾಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದ್ದರು.

ಖಾನಾಪುರ ಠಾಣೆಯಲ್ಲಿ ಸಿ.ಟಿ ರವಿ ಅವರನ್ನು ಬಂಧಿಸಿಡಲಾಗಿತ್ತು. ಠಾಣೆ ಮುಂದೆ ಬಿಜೆಪಿ ಎಂಎಲ್ಸಿ ರವಿಕುಮಾರ್, ಸುಭಾಷ್ ಪಾಟೀಲ್, ಸಂಜಯ್ ಪಾಟೀಲ್, ಸೇರಿದಂತೆ ಮತ್ತಿತ್ತತರು ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ. ನಂತರ ವಿಪಕ್ಷ ನಾಯಕ ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಮಾಜಿ ಸಚಿವ ಪ್ರಭು ಚೌಹಾಣ್‌ ಖಾನಾಪುರ ಪೊಲೀಸ್ ಠಾಣೆಗೆ ಲಗ್ಗೆ ಹಾಕಿದ್ದಾರೆ. ಆದರೆ ಠಾಣೆಯೊಳಗೆ ಯಾರನ್ನೂ ಬಿಡದ ಕಾರಣ ಭಾರಿ ಜಟಾಪಟಿ ನಡೆಯಿತು. ಪೊಲೀಸ್ ನಡೆಗೆ ಕೆರಳಿದ ಆರ್.ಅಶೋಕ್ ನಾನು ಸಹ ಹೋಂ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದೇನೆ. ಇದೆಲ್ಲವೂ ನಡೆಯೋದಿಲ್ಲ, ನಿಮ್ಮನ್ನ ನೋಡಿಕೊಳ್ತೇನೆ ಎಂದು ಕಮಿಷನರ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸಿ.ಟಿ.ರವಿ ಪ್ರತಿದೂರು

ಖಾನಾಪುರ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಕಾನೂನು ಸುವ್ಯವಸ್ಥೆ ಕಾರಣ ಪೊಲೀಸರು ಸಿ.ಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಈ ವೇಳೆಯೂ ಭಾರಿ ಹೈಡ್ರಾಮ ನಡೆಯಿತು. ಬಿಜೆಪಿ ನಾಯಕರು ಏಕಾಏಕಿ ಮುಗಿಬಿದ್ದರು. ಇದರಿಂದ ಭಾರಿ ತಳ್ಳಾಟ, ನೂಕಾಟ ನಡೆಯಿತು.

ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ ರವಿ ನನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಸಿಟಿ ರವಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಈ ಕಾಂಗ್ರೆಸ್​ನವರು ಏನು ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ಸರ್ಕಾರ ಬೆಳಗಾವಿಯನ್ನು ಮಿನಿ ಪಾಕಿಸ್ಥಾನ ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ಡಿಸಿಎಂ ಮತ್ತು ಗೃಹ ಸಚಿವರ ಸೂಚನೆಯಂತೆ ಪೊಲೀಸ್ ಕಮಿಷನರ್ ವರ್ತಿಸುತ್ತಿದ್ದಾರೆ. ಸಿ.ಟಿ ರವಿ ತಲೆಗೆ ರಕ್ತ ಬರುವಂತೆ ಏಟು ಬಿದ್ದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top