ಹಲವು ವಿಶೇಷತೆಗಳಿಗೆ, ಪ್ರಥಮಗಳಿಗೆ ಸಾಕ್ಷಿಯಾಗಲಿರುವ ಸಾಹಿತ್ಯ ಸಮ್ಮೇಳನ
ಏನೆಲ್ಲ ಕಾರ್ಯಕ್ರಮ, ಊಟಕ್ಕೆ ಏನಿರಲಿದೆ ಐಟಂ?- ಇಲ್ಲಿದೆ ಸಂಪೂರ್ಣ ಮಾಹಿತಿ
ಮಂಡ್ಯ : ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಸಂಭ್ರಮದ ಕನ್ನಡ ನುಡಿ ಜಾತ್ರೆಗೆ ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಸಿಂಗಾರಗೊಂಡು ನಿಂತಿದೆ. 87ನೇ ಸಾಹಿತ್ಯ ಸಮ್ಮೇಳನದ ತಯಾರಿ ಅಂತಿಮ ಹಂತಕ್ಕೆ ತಲುಪಿದ್ದು, ಹಲವು ಪ್ರಥಮ ಮತ್ತು ವಿಶೇಷತೆಗಳಿಗೆ ಈ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಲಿದೆ. ಇಡೀ ನಗರ ಕನ್ನಡದ ಹಬ್ಬಕ್ಕಾಗಿ ಶೃಂಗಾರಗೊಂಡಿದ್ದು, ಎಲ್ಲೆಡೆ ಕನ್ನಡ ಬಾವುಟ, ಪತಾಕೆಗಳು ಹಾರಾಡುತ್ತಿವೆ. ಸಾಹಿತಿಗಳನ್ನು ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಮಂಡ್ಯ ಸಿದ್ಧವಾಗಿದೆ.
ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ವೇದಿಕೆ ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದ್ದು, 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಸುಗ್ಗಿ ಕುಣಿತ, ಕೋಲಾಟ ಸೇರಿ 50ಕ್ಕೂ ಹೆಚ್ಚು ಕಲಾ ತಂಡಗಳು, ಪೂರ್ಣಕುಂಭ ಹೊತ್ತ 300 ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಗೆ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಅವರು ಚಾಲನೆ ನೀಡಲಿದ್ದಾರೆ.
ಮೂರು ವೇದಿಕೆಯಲ್ಲಿ ಕಾರ್ಯಕ್ರಮ
ಸಮ್ಮೇಳನಕ್ಕೆ 70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ, 60 ಎಕರೆ ಪ್ರದೇಶದಲ್ಲಿ ಪಾರ್ಕಿ೦ಗ್‌ಗೆ ವ್ಯವಸ್ಥೆ ಮಾಡಲಾಗಿದೆ. 55 ವಸ್ತುಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆ, 450 ಪುಸ್ತಕ ಮಳಿಗೆಗಳು ತಲೆ ಎತ್ತಿವೆ. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್‌ಗಳನ್ನು ತೆರೆಯಲಾಗಿದೆ. 150ಕ್ಕೂ ಹೆಚ್ಚು ಕಡೆ ಶೌಚಾಲಯ ನಿರ್ಮಾಣ, 6 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರಷ್, ಪೇಸ್ಟ್, ಸೋಪು, ಬೆಡ್‌ಶೀಟ್ ಒಳಗೊಂಡ ಲೇದರ್‌ಬ್ಯಾಗ್‌ನಲ್ಲಿ ವಸತಿ, ಸಮ್ಮೇಳನದ ಕಿಟ್ ನೀಡಲಾಗುತ್ತಿದೆ.
ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಸೇರಿದಂತೆ 11 ಗೋಷ್ಠಿಗಳು, 2 ಸಮಾನಾಂತರ ವೇದಿಕೆಗಳಲ್ಲಿ 20 ಗೋಷ್ಠಿಗಳು ಆಯೋಜನೆಗೊಂಡಿವೆ. ಗೊ.ರು.ಚನ್ನಬಸಪ್ಪ ಅವರೇ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿರುವ ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ, ಕನ್ನಡದಿಂದ ಇಟಲಿಯನ್‌ಗೆ ಅನುವಾದಗೊಂಡಿರುವ ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರ ಶರಪಂಚರ ಕಾದಂಬರಿ ಬಿಡುಗಡೆ ಆಗಲಿದೆ. ನಾಡುನುಡಿಗೆ ಸೇವೆ ಸಲ್ಲಿಸಿದ 170 ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಮ್ಮೇಳನದ ಸ್ಮರಣಾರ್ಥ 87 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ‘ಬೆಲ್ಲದಾರತಿ’ ಹೆಸರಿನ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.
ಸಂಗೀತ ರಸಮಂಜರಿಯೂ ಇದೆ
ಮೊದಲ ದಿನ ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡದವರಿಂದ ಸಂಗೀತ ಸಂಜೆ, ಡಿ.21ರಂದು ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ಡಿ.22ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪೊಲೀಸ್ ಬ್ಯಾಂಡ್ ಇರಲಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಕೆಎಸ್‌ಆರ್‌ಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯ-ದಕ್ಷಿಣ ಕರ್ನಾಟಕ ಶೈಲಿಯ ಊಟೋಪಚಾರ
ಸಾಹಿತ್ಯ ಸಮ್ಮೇಳನದ ಊಟ, ಉಪಾಹಾರದ ಮೆನು ತಯಾರಾಗಿದೆ. ರೊಟ್ಟಿ, ಸಿಹಿತಿಂಡಿ ಮತ್ತಿತರ ಅಡುಗೆ ತಯಾರಿಯೂ ಆರಂಭಗೊಂಡಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮಂಡ್ಯ ಶೈಲಿಯ ಸಾಂಪ್ರದಾಯಿಕ ಶಾಖಾಹಾರಿ ಭೋಜನಕ್ಕೆ ಒತ್ತು ನೀಡಲಾಗಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಪುಷ್ಕಳ ಭೋಜನ ಉಣಬಡಿಸಲಾಗುತ್ತದೆ. ಒಂದು ದಿನಕ್ಕೆ 70 ಸಾವಿರ ಜನರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ನಗರ ಹೊರವಲಯದ ಶ್ರೀನಿವಾಸಪುರ ಬಳಿ ನಿರ್ಮಾಣವಾಗುತ್ತಿರುವ ವೇದಿಕೆ ಸಮೀಪವೇ ಊಟ ವಿತರಣೆಗೆ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ.
ನಾನ್‌ವೆಜ್ ಇಲ್ಲ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಕೊಡಬೇಕು ಎಂಬ ಬೇಡಿಕೆ ಒಂದು ವರ್ಗದಿಂದ ಕೇಳಿಬಂದಿತ್ತು. ಮಂಡ್ಯ ಮಾಂಸಾಹಾರಕ್ಕೂ ಜನಪ್ರಿಯವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಂಪ್ರದಾಯಿಕ ಆಹಾರ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು. ಆದರೆ ಈ ಬೇಡಿಕೆಗೆ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಮಾಂಸಾಹಾರಕ್ಕೆ ಬೇಡಿಕೆ ಇಟ್ಟವರು ಮನೆಗೊಂದು ಕೋಳಿ ಊರಿಗೊಂದು ಕುರಿ ಎಂಬ ಅಭಿಯಾನ ಶುರುಮಾಡಿ ಪ್ರತಿಭಟಿಸುತ್ತಿದ್ದಾರೆ.
ಊಟದ ಮೆನುವಿನಲ್ಲಿ ಏನೇನಲ್ಲ ಇದೆ?
ಉತ್ತರ ಕರ್ನಾಟಕ ಜೋಳದ ರೊಟ್ಟಿ, ಅಕ್ಕಿ ರೊಟ್ಟಿ ರುಚಿಯನ್ನು ಸವಿಯಬಹುದಾಗಿದೆ. ಇದರ ಜತೆಗೆ ಮಂಡ್ಯ ಸೊಗಡಿನ ಮುದ್ದೆ, ಸೊಪ್ಪು ಸಾಂಬಾರ್ ಕೂಡ ಸ್ಥಾನ ಪಡೆದಿದೆ. ಕಾಯಿ ಹೋಳಿಗೆ, ತುಪ್ಪ, ಚಟ್ನಿಪುಡಿ, ರಾಗಿ ದೋಸೆ, ಸಿಹಿಪೊಂಗಲ್, ಕ್ಯಾರೆಟ್ ಹಲ್ವ ಕನ್ನಡಾಭಿಮಾನಿಗಳ ಬಾಯಲ್ಲಿ ನೀರೂರಿಸಲು ಸಿದ್ಧವಾಗಿವೆ.
ಸಿಹಿ ತಿಂಡಿಗೆ ಮಂಡ್ಯದ ಬೆಲ್ಲ ಬಳಕೆ
ಸಮ್ಮೇಳನದಲ್ಲಿ ಮಾಡುತ್ತಿರುವ ಪ್ರತಿಯೊಂದು ಸಿಹಿ ತಿಂಡಿಗೂ ಮಂಡ್ಯದ ಬೆಲ್ಲ ಬಳಸುತ್ತಿರುವುದು ವಿಶೇಷವಾಗಿದೆ. ಮೈಸೂರು ಪಾಕ್, ಪೊಂಗಲ್, ಹೋಳಿಗೆ, ಬಾದೂಷ, ಲಾಡುಗಳಲ್ಲಿ ಮಂಡ್ಯದ ಬೆಲ್ಲದ ಸಿಹಿಯಿರಲಿದೆ.
ದಿನಕ್ಕೆ 70 ಸಾವಿರ ಜನರಿಗೆ ಆಹಾರ
ಸಮ್ಮೇಳನಕ್ಕೆ ಇಂತಿಷ್ಟೇ ಜನರು ಆಗಮಿಸುತ್ತಾರೆ ಎಂದು ಈಗಲೇ ನಿರ್ಧರಿಸುವುದು ಕಷ್ಟವಾಗಿರುವುದರಿಂದ ಸದ್ಯಕ್ಕೆ ಒಂದು ದಿನಕ್ಕೆ 70 ಸಾವಿರ ಜನರಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನರು ಹೆಚ್ಚಾದರೆ ಪ್ಲೇಟ್‌ಗಳ ಆಧಾರದಲ್ಲಿ ಹಣ ಪಾವತಿಗೆ ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಗಣ್ಯರ ಊಟದ ಮೆನು ಏನು?
ಡಿಸೆಂಬರ್ 20 : ಬೆಳಗ್ಗೆ ತಿಂಡಿ – ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬಾರ್, ಉಪ್ಮ, ಮೈಸೂರ್ ಪಾಕ್, ಮಧ್ಯಾಹ್ನ – ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿ ಪುಡಿ, ಮೆಂತ್ಯ ಬಾತ್, ರಾಯಿತ, ಮೊಳಕೆ ಕಾಳು ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್, ರಾತ್ರಿ ಊಟ – ಪೂರಿ-ಸಾಗು, ಮೈಸೂರು ಪಾಕ್, ಅವರೆಕಾಳು ಬಾತ್, ರಾಯಿತ, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಪಲ್ಯ, ಸಲಾಡ್.
ಡಿಸೆಂಬರ್ 21: ಬೆಳಗ್ಗೆ ತಿಂಡಿ – ರಾಗಿದೋಸೆ, ಸಿಹಿಪೊಂಗಲ್, ಖಾರಾ ಪೊಂಗಲ್, ಮಧ್ಯಾಹ್ನ ಊಟ – ಅಕ್ಕಿ ರೊಟ್ಟಿ, ಮಿಶ್ರ ತರಕಾರಿ ಪಲ್ಯ, ವೆಜ್ ಪಲಾವ್, ರಾಯತ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಹಪ್ಪಳ, ಸಲಾಡ್, ರಾತ್ರಿ ಊಟ – ಚಪಾತಿ, ಸಾಗು, ಘೀ ರೈಸ್, ಕುರ್ಮಾ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್.
ಡಿಸೆಂಬರ್ 22: ಬೆಳಗ್ಗೆ ತಿಂಡಿ – ದೋಸೆ ಚಟ್ನಿ, ಟೊಮ್ಯಾಟೋ ಬಾತ್, ಕ್ಯಾರೆಟ್ ಹಲ್ವಾ, ಮಧ್ಯಾಹ್ನ ಊಟ – ಬಿಳಿ ಹೋಳಿಗೆ, ಸಾಗೂ ಜೀರಾ ರೈಸ್, ಪಪ್ಪು, ಬಾದೂಷ, ಮುದ್ದೆ, ಅನ್ನ, ಸೊಪ್ಪಿನ ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್, ರಾತ್ರಿ – ಮೆಂತ್ಯೆ ಬಾತ್, ರಾಯಿತ, ಕೊಬ್ಬರಿ ಮಿಠಾಯಿ, ಅನ್ನ, ರಸಂ, ಮೊಸರು, ಬಾಳೆಹಣ್ಣು, ಕೋಸಂಬರಿ, ಪಲ್ಯ, ಹಪ್ಪಳ, ಸಲಾಡ್.
ಸಾರ್ವಜನಿಕರು, ಪ್ರತಿನಿಧಿಗಳು, ಸಿಬ್ಬಂದಿ
ಡಿಸೆಂಬರ್ 20: ಬೆಳಗ್ಗೆ – ಇಡ್ಲಿ, ವಡೆ, ಸಾಂಬಾರ್, ಮೈಸೂರು ಪಾಕ್, ಮಧ್ಯಾಹ್ನ ಊಟ – ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದೆಕಾಯಿ ಎಣ್ಣೆಗಾಯಿ, ಚಟ್ನಿ ಪುಡಿ, ಅನ್ನ, ಮೊಳಕೆಕಾಳು ಸಾಂಬಾರ್, ಮೊರು, ಹಪ್ಪಳ, ರಾತ್ರಿ ಊಟ – ಪೂರಿ, ಸಾಗು, ಮೈಸೂರು ಪಾಕ್, ಅವರೆಕಾಳು ಬಾತು, ರಾಯುತ, ಮೊಸರು, ಹಪ್ಪಳ.
ಡಿಸೆಂಬರ್ 21: ಬೆಳಗ್ಗೆ ತಿಂಡಿ – ಚಿತ್ರಾನ್ನ, ವಡೆ, ಸಿಹಿ ಪೊಂಗಲ್, ಮಧ್ಯಾಹ್ನ – ಅಕ್ಕಿರೊಟ್ಟಿ, ಮಿಶ್ರ ತರಕಾರಿ ಪಲ್ಯ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಹಪ್ಪಳ, ರಾತ್ರಿ – ಚಪಾತಿ, ಸಾಗು, ಡ್ರೈ ಜಾಮೂನು, ಅನ್ನ, ಸಾಂಬಾರ್, ಹಪ್ಪಳ.
ಡಿಸೆಂಬರ್ 22: ಬೆಳಗ್ಗೆ ತಿಂಡಿ – ಟೊಮೆಟೊ ಬಾತ್, ಕ್ಯಾರೆಟ್ ಹಲ್ವ, ಮಧ್ಯಾಹ್ನ – ಬಾದೂಷ, ಮುದ್ದೆ, ಅನ್ನ, ಸೊಪ್ಪಿನ ಸಾಂಬಾರ್, ಹಪ್ಪಳ, ರಾತ್ರಿ – ಮೆಂತ್ಯ ಬಾತ್, ರಾಯಿತ, ಕೊಬ್ಬರಿ ಮಿಠಾಯಿ, ಅನ್ನ, ರಸಂ, ಹಪ್ಪಳ.
ಸ್ವಚ್ಛತೆಗೆ ಮೊದಲ ಆದ್ಯತೆ
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಹಾರದ ಗುಣಮಟ್ಟ ಪರೀಕ್ಷೆ ಮಾಡಿ ವರದಿ ಪಡೆಯಲಾಗುತ್ತದೆ. ನೀರನ್ನು ಸಹ ಪರೀಕ್ಷಿಸಲಾಗುತ್ತದೆ. ಸ್ವಚ್ಛತೆಗೆ 250 ಸಿಬ್ಬಂದಿಯನ್ನು ನೇಮಿಸಲಾಗಿದೆ. 150ಕ್ಕೂ ಹೆಚ್ಚು ಕಡೆ ಶೌಚಾಲಯ ನಿರ್ಮಿಸಲಾಗಿದೆ.