ಶಕ್ತಿ ಯೋಜನೆಯ ಬಾಕಿಯಿರುವ 2 ಸಾವಿರ ಕೋ. ರೂ. ಬಿಡುಗಡೆಗೆ ಬೇಡಿಕೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯ ಸಮಿತಿ ಸೇರಿ ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಡಿಸೆಂಬರ್ 31 ಮಧ್ಯರಾತ್ರಿಯಿಂದಲೇ ಸಾರಿಗೆ ಮುಷ್ಕರ ಘೋಷಣೆಯಾಗಿದ್ದು, ಹೊಸ ವರ್ಷದ ಮೊದಲ ದಿನವೇ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಗಬಹುದು.
ಮುಷ್ಕರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬುಧವಾರದಿಂದಲೇ ಸಾರಿಗೆ ನೌಕರರ ಸಂಘಟನೆಗಳು ಡಿಸೆಂಬರ್ 31 ರಿಂದ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳು ಸಂಚಾರ ಮಾಡುವುದು ಅನುಮಾನವಾಗಿದೆ. ಜನವರಿ 1ರಿಂದ ಬಸ್ ಸಂಚಾರ ಇರುವುದಿಲ್ಲ, ಸಹಕರಿಸಿ ಎಂದು ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಕರಪತ್ರ ಹಂಚಿದ್ದಾರೆ.
ಶಕ್ತಿ ಯೋಜನೆಯ ಬಾಕಿ ಹಣವೇ ಎರಡು ಸಾವಿರ ಕೋಟಿ ರೂಪಾಯಿಯಷ್ಟು ಇದೆ. ಅದನ್ನು ಬಿಡುಗಡೆ ಮಾಡಬೇಕು ಎಂಬುದು ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾಗಿದೆ. ಇದರ ಜೊತೆಗೆ ವೇತನ ಏರಿಕೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲುದ್ದೇಶಿಸಿದ್ದಾರೆ.
ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 9ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ಮಾಡುವ ಮುನ್ನ 21 ದಿನಗಳ ಕಾಲ ಮುಂಚಿತವಾಗಿ ನೋಟಿಸ್ ನೀಡಬೇಕು. ಆ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರಕ್ಕೆ ನೋಟಿಸ್ ನೀಡಿದೆ. ಆರು ಸಾರಿಗೆ ನೌಕರರ ಸಂಘಟನೆಗಳು ಸೇರಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇಲ್ಲಿಯವರೆಗೆ ಸರಕಾರ ಜಂಟಿ ಕ್ರಿಯಾ ಸಮಿತಿ ಜೊತೆಗೆ ಮಾತುಕತೆಗೆ ಮುಂದಾಗಿಲ್ಲ.