ಭಯಭೀತರಾಗಿ ಸಹಾಯಕ್ಕಾಗಿ ಬೊಬ್ಬಿಟ್ಟ ಮಹಿಳೆಯರು
ಮುಂಬಯಿ : ಜನರ ಗಮನ ಸೆಳೆಯುವ ಸಲುವಾಗಿ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಿವಸ್ತ್ರರಾಗಿ ಕಾಣಿಸಿಕೊಂಡು ಹುಚ್ಚಾಟವಾಡುವ ಘಟನೆಗಳು ಆಗಾಗ ವಿದೇಶಗಳಲ್ಲಿ ವರದಿಯಾಗುತ್ತಿರುತ್ತವೆ. ಕ್ರಿಕೆಟ್ ಅಥವಾ ಫುಟ್ಬಾಲ್ ಪಂದ್ಯಗಳು ನಡೆಯುವಾಗ ಕೆಲವರು ನಗ್ನವಾಗಿ ಸ್ಟೇಡಿಯಂಗೆ ನುಗ್ಗುತ್ತಾರೆ. ಆದರೆ ಈಗ ಭಾರತದಲ್ಲೂ ಈ ಮಾದರಿಯ ಘಟನೆಯೊಂದು ಸಂಭವಿಸಿದೆ. ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ಲೋಕಲ್ ರೈಲಿನ ಮಹಿಳೆಯರ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ ಘಟನೆ ಮುಂಬಯಿಯಲ್ಲಿ ಸಂಭವಿಸಿದೆ.
ಈ ನಗ್ನ ವ್ಯಕ್ತಿಯನ್ನು ಕಂಡು ಮಹಿಳೆಯರು ಭಯದಿಂದ ಕಿರುಚಾಡಿದ್ದು, ಕೊನೆಗೆ ಟಿಟಿಇ ಬಂದು ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸೋಮವಾರ ಸಂಜೆ ನಗ್ನ ವ್ಯಕ್ತಿಯೊಬ್ಬ ರೈಲಿನಲ್ಲಿ ಮಹಿಳೆಯರಿದ್ದ ಭೋಗಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾನೆ. ಕಲ್ಯಾಣ್‌ನಿಂದ ಛತ್ರವತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಪ್ರಯಾಣಿಸುತ್ತಿದ್ದ ಲೋಕಲ್ ಟ್ರೈನ್ ಘಾಟ್‌ಕೋಪರ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಂಪೂರ್ಣ ಬೆತ್ತಲಾಗಿದ್ದ ವ್ಯಕ್ತಿ ರೈಲಿನ ಮಹಿಳಾ ಕೋಚ್‌ಗೆ ನುಗ್ಗಿದ್ದಾನೆ. ಈತನನ್ನು ಕಂಡು ಮಹಿಳಾ ಪ್ರಯಾಣಿಕರು ಭಯದಿಂದ ಕಿರಿಚಾಡಿದ್ದು, ನಂತರ ಟಿಟಿಇ ಸ್ಥಳಕ್ಕಾಗಮಿಸಿ ಆತನನ್ನು ಹೊರ ದಬ್ಬಿದ್ದಾರೆ.
santryal ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನ ಬಾಗಿಲಿನ ಬಳಿ ನಿಂತಿರುವ ದೃಶ್ಯವನ್ನು ಕಾಣಬಹುದು. ಕೂಡಲೇ ಅಲ್ಲಿದ್ದ ಮಹಿಳೆಯರು ಸಹಾಯಕ್ಕಾಗಿ ಟಿಟಿಇಯನ್ನು ಕರೆದಿದ್ದು, ತಕ್ಷಣ ಬಂದ ಟಿಟಿಇ ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ಘಟನೆಯ ಬಗ್ಗೆ ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಸುರಕ್ಷತೆಯ ದೃಷ್ಟಿಯಿಂದ ರೈಲಿನಲ್ಲಿ ಆರ್‌ಪಿಎ ಸಿಬ್ಬಂದಿಗಳನ್ನು ನೇಮಿಸಿ ಎಂದು ಒತ್ತಾಯಿಸಿದ್ದಾರೆ.