ರಷ್ಯಾದಲ್ಲಿ ಕ್ಯಾನ್ಸರ್ ಪ್ರತಿಬಂಧಕ ಲಸಿಕೆ ಸಂಶೋಧನೆ
ಮಾಸ್ಕೊ: ಮನುಕುಲವನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಮಾರಕ ಕ್ಯಾನ್ಸರ್ ರೋಗಕ್ಕೆ ಕೊನೆಗೂ ಲಸಿಕೆ ಸಿಕ್ಕಿದೆ. ರಷ್ಯಾದ ಆರೋಗ್ಯ ಸಚಿವಾಲಯದ ಮಾತನ್ನು ನಂಬುವುದಾದರೆ ಮುಂದಿನ ವರ್ಷವೇ ಮನುಷ್ಯನಿಗೆ ಕ್ಯಾನ್ಸರ್ ರೋಗ ಬಾರದಂತೆ ತಡೆಯುವ ಲಸಿಕೆ ಮಾರುಕಟ್ಟೆಗೆ ಬರಲಿದೆ. ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾದ ಆರೋಗ್ಯ ಸಚಿವಾಲಯ ಘೋಷಿಸಿದೆ. ಇಷ್ಟು ಮಾತ್ರವಲ್ಲ ಅದನ್ನು ತನ್ನ ನಾಗರಿಕರಿಗೆ ಉಚಿತವಾಗಿ ನೀಡಲಾಗುವುದೂ ಎಂದೂ ಹೇಳಿದೆ. ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣ ಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಆಂಡ್ರೆ ಕಪ್ರಿನ್ ಲಸಿಕೆ ಕಂಡುಹಿಡಿದಿರುವುದನ್ನು ಘೋಷಿಸಿದ್ದಾರೆ.
ಈ ಲಸಿಕೆ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಇರುತ್ತದೆ. ಗಡ್ಡೆಯ ರಚನೆಯನ್ನು ತಡೆಯಲು ಇದನ್ನು ಬಳಸಲಾಗುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕ್ಯಾನ್ಸರ್ ಲಸಿಕೆಗಳಂತೆಯೇ ಪ್ರತಿ ಶಾಟ್ ಅನ್ನು ಪ್ರತಿ ರೋಗಿಗೆ ಅನುಗುಣವಾಗಿ ಮಾಡಲಾಗುತ್ತದೆ ಎಂದು ರಷ್ಯಾದ ವಿಜ್ಞಾನಿಗಳು ಹೇಳಿದ್ದಾರೆ. ಲಸಿಕೆ ಯಾವ ರೀತಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡುತ್ತದೆ, ಅದು ಎಷ್ಟು ಪರಿಣಾಮಕಾರಿಯಾಗಿದೆ ಅಥವಾ ರಷ್ಯಾ ಅದನ್ನು ಹೇಗೆ ಕಾರ್ಯಗತಗೊಳಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ಸಮಯದಲ್ಲಿ, ಲಸಿಕೆ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ರಷ್ಯಾದಲ್ಲಿಯೂ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. 2022ರಲ್ಲಿ 635,000ಕ್ಕೂ ಹೆಚ್ಚು ಕ್ಯಾನ್ಸರ್ ರೋಗ ಪ್ರಕರಣಗಳು ದಾಖಲಾಗಿವೆ. ಕೊಲೊನ್, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ಗಳು ರಷ್ಯಾದಲ್ಲಿ ಹೆಚ್ಚು ಸಾಮಾನ್ಯವೆಂದು ಹೇಳಲಾಗುತ್ತದೆ.
ದೇಶದ ವಿಜ್ಞಾನಿಗಳು ಕ್ಯಾನ್ಸರ್ ಲಸಿಕೆ ಸಂಶೋಧನೆ ಮಾಡುತ್ತಿದ್ದಾರೆ, ಅದು ಅಂತಿಮ ಹಂತದಲ್ಲಿದೆ. ನಾವು ಕ್ಯಾನ್ಸರ್ ಲಸಿಕೆಗಳು ಹಾಗೂ ಹೊಸ ಪೀಳಿಗೆಯ ಇಮ್ಯುನೊಮಾಡ್ಯುಲೇಟರಿ ಔಷಧಗಳ ರಚನೆಗೆ ಬಹಳ ಹತ್ತಿರವಾಗುತ್ತಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲ ಸಮಯದ ಹಿಂದೆ ಹೇಳಿದ್ದರು.
ರಷ್ಯಾ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳು ಕ್ಯಾನ್ಸರ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಮೇ ತಿಂಗಳಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ನಾಲ್ಕು ರೋಗಿಗಳ ಮೇಲೆ ಲಸಿಕೆಗಳನ್ನು ಪರಿಶೀಲಿಸುತ್ತಿದ್ದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ -19ಗಾಗಿ ರಷ್ಯಾ ತನ್ನದೇ ಆದ ಸ್ಪುಟ್ನಿಕ್ ವಿ ಲಸಿಕೆಯನ್ನು ತಯಾರಿಸಿತು ಮತ್ತು ಅದನ್ನು ಹಲವಾರು ದೇಶಗಳಿಗೆ ಮಾರಾಟ ಮಾಡಿತ್ತು.