ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಕೊಳಚೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ

ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧ ಖಂಡಿತವಾಗಿ ಇಲ್ಲ ಎನ್ನುವುದು ಸತ್ಯ. ಕೆಳಗೆ ನಾನು ಬರೆದ ಪ್ರತಿ ವಾಕ್ಯಕ್ಕೂ ಅಪವಾದಗಳು ಇವೆ.

ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು































 
 

ನಮ್ಮ ಹಿರಿಯರು ‘ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು’ ಎಂಬ ಆಶಯದಲ್ಲಿ ಈ ಮೇಲಿನ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ.

‘ಗುಡಿಸಲಲ್ಲಿ ಪ್ರತಿಭೆಗಳು ಹುಟ್ಟುತ್ತವೆ, ಅರಮನೆಯಲ್ಲಿ ಸಾಯುತ್ತವೆ’ ಎಂದು ಶೇಕ್ಸ್‌ಪಿಯರ್ ಹೇಳಿದ್ದಾನೆ. ನಮ್ಮೆಲ್ಲರ ಕನಸುಗಳೂ ಹಾಗೆ. ಶ್ರೀಮಂತರ ಮಕ್ಕಳು ಕಾಣುವುದಕ್ಕಿಂತ ಹೆಚ್ಚು ಶ್ರೀಮಂತವಾದ ಕನಸುಗಳನ್ನು ಬಡವರ ಮಕ್ಕಳು ಕಾಣುತ್ತಾರೆ ಅಂತ ಒಂದು ಸಂಶೋಧನೆ ನಮಗೆ ತೋರಿಸಿಕೊಟ್ಟಿದೆ.

ಪ್ರತಿಭೆಗೆ ಶ್ರೀಮಂತಿಕೆ, ಬಡತನ ಎಂಬ ಬೇಧ ಇಲ್ಲ

ಶ್ರೀಮಂತರ ಮಕ್ಕಳಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳನ್ನು ಹೊಂದಿದವರು ಇದ್ದಾರೆ. ಆದರೆ ಅವರು ತಮ್ಮ ಅಪ್ಪ ಅಮ್ಮ ಹಾಕಿ ಕೊಟ್ಟಿರುವ COMFORT ZONE ದಾಟಲು ಹಿಂಜರಿಯುತ್ತಾರೆ. ರಿಸ್ಕ್ ತೆಗೆದುಕೊಳ್ಳಲು ಹೋಗುವುದೇ ಇಲ್ಲ.

ಆದರೆ ಈ ಬಡವರ ಮಕ್ಕಳು ಶೂನ್ಯದಿಂದಲೇ ಎಲ್ಲವನ್ನೂ ಕ್ರಿಯೇಟ್ ಮಾಡಬೇಕಾದ ಕಾರಣ ಹೋರಾಟದ ಹಾದಿ ಹಿಡಿಯುತ್ತಾರೆ ಮತ್ತು ಎಲ್ಲವನ್ನೂ ಬೆವರನ್ನು ಬಸಿದು ಸಂಪಾದನೆ ಮಾಡುತ್ತಾರೆ. ಅವರಿಗೆ ಹೆಚ್ಚು ಸಾಮಾಜಿಕ ಎಕ್ಸಪೋಷರ್ ಇಲ್ಲದ ಕಾರಣ ಸೋಲುವ ಭಯ ಕಡಿಮೆ ಇರುತ್ತದೆ. ಸೋತರೂ ಅವರಿಗೆ ಅಲ್ಲಿಂದ ಹೇಗೆ ಎದ್ದು ಬರಬೇಕು ಎಂದು ಗೊತ್ತಿರುತ್ತದೆ. ‘RISK FACTOR’ ಅವರಿಗೆ ತೊಂದರೆ ಕೊಡುವುದಿಲ್ಲ.

ಗೆದ್ದವರಲ್ಲಿ ಶೇ.83 ಮಂದಿ ಅಂತವರೆ ಆಗಿರುತ್ತಾರೆ

ಒಂದು ಜಾಗತಿಕ ಮಟ್ಟದ ಸಮೀಕ್ಷೆಯ ಫಲಿತಾಂಶ ನಾನು ನಿಮಗೆ ಹೇಳಬೇಕು. ಒಂದು ಸಂಸ್ಥೆ ವೋಟಿಂಗ್ ಮೂಲಕ ಜಗತ್ತಿನ ನೂರು ಜನ ಮಹಾನ್ ಸಾಧಕರ ಪಟ್ಟಿಯನ್ನು ಮಾಡಿತು. ನಂತರ ಅವರೆಲ್ಲರ ಬದುಕಿನ ಹಿನ್ನೆಲೆಗಳನ್ನು ಅಧ್ಯಯನ ಮಾಡಲಾಯಿತು. ಆಗ ತಿಳಿದು ಬಂದ ಈ ಅಂಶಗಳು ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತವೆ.

ಆ ನೂರು ಮಂದಿಯಲ್ಲಿ 83 ಜನರು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಹೆಚ್ಚಿನವರು ಬಾಲ್ಯದಲ್ಲಿ ತಮ್ಮ ಅಪ್ಪನ ಅಥವಾ ಅಮ್ಮನ ಪ್ರೀತಿಯಿಂದ ವಂಚಿತರಾದವರು. ಶಿಕ್ಷಣ ಪಡೆಯಲು ಭಾರಿ ಹೋರಾಟ ಮಾಡಿದವರು. ಹಸಿವು, ಬಡತನ, ಅಪಮಾನ ಎಲ್ಲವನ್ನೂ ಅನುಭವಿಸಿದವರು. ಅದರಲ್ಲಿಯೂ 13 ಮಂದಿ ತುಳಿತಕ್ಕೆ ಒಳಗಾದ ಮೂಲಗಳಿಂದ ಬಂದವರು.

ಬಡವರ ಮಕ್ಕಳಿಗೆ ಸೌಕರ್ಯ ಮತ್ತು ಸಪೋರ್ಟ್ ಕಡಿಮೆ ಇರಬಹುದು

ಶ್ರೀಮಂತ ಮಕ್ಕಳಲ್ಲಿಯೂ ಪ್ರತಿಭೆ ಇರುತ್ತದೆ. ಆದರೆ ಅವರು ಹೆಚ್ಚು ಸ್ಟೂಡಿಯಸ್ ಆಗಿರಬೇಕು ಎಂದು ಅವರ ಪೋಷಕರು ಭಾವಿಸುತ್ತಾರೆ. ಅವರಿಗೆ ಮಕ್ಕಳ ಶಿಕ್ಷಣವೂ ಒಂದು ಪ್ರೆಸ್ಟೀಜ್ ವಿಷಯವಾಗಿರುತ್ತದೆ. ನನ್ನ ಮಗ, ಮಗಳು ಆ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದಾರೆ, ಈ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾರೆ ಅನ್ನೋದು ಅವರಿಗೆ ಒಂದು ಜಾಹೀರಾತು ಇದ್ದಂತೆ.

ಹೆತ್ತವರ ಇಗೋ ಎಷ್ಟರಮಟ್ಟಿಗೆ ಇದೆ ಅಂದರೆ ಅವರ ಮಕ್ಕಳು ಎಲ್ಲ ಕಡೆಯೂ ಗೆಲ್ಲುತ್ತಾ ಇರಬೇಕು, ಎಲ್ಲಿಯೂ ಸೋಲಬಾರದು ಎಂಬ ವಿಪರೀತ ಎನಿಸುವಷ್ಟು ಕಾಳಜಿ ಮಾಡುತ್ತಾರೆ. ಮಕ್ಕಳು ಕೂಡ ತಾವು ಗೆಲ್ಲಲು ಮಾತ್ರ ಹುಟ್ಟಿದವರು ಎಂದು ಭ್ರಮೆಗಳ ಮಧ್ಯೆಯೇ ಬದುಕುತ್ತಾರೆ. ನಾನು ಹೇಳುವ ಈ ಎಲ್ಲ ಅಂಶಗಳಿಗೂ ಅಪವಾದಗಳು ಇವೆ ಅನ್ನುವುದು ಖಂಡಿತವಾಗಿ ಹೌದು. ಆದರೆ ಹೆಚ್ಚಿನ ಶ್ರೀಮಂತ ಹೆತ್ತವರು ಮತ್ತು ಮಕ್ಕಳು ನಾನು ಮೇಲೆ ಹೇಳಿದ ಹಾಗೆಯೇ ಇರುತ್ತಾರೆ. ಅದಕ್ಕೆ ಹೆತ್ತವರ ಇಗೋ ಕಾರಣವೇ ಹೊರತು ಮಕ್ಕಳ ತಪ್ಪು ಇರುವುದಿಲ್ಲ.

ವೈಭವದ ಶಾಲೆಗಳು ಹೇಗಿರುತ್ತವೆ?

ಆ ಶಾಲೆಗಳು ಹೇಗಿರುತ್ತವೆ ಎಂಬುದನ್ನು ನಾನು ನಿಮಗೆ ಮತ್ತೆ ವಿವರಿಸಿ ಹೇಳುವ ಅಗತ್ಯ ಇಲ್ಲ. ಅವುಗಳಿಗೂ ಮಕ್ಕಳ ಪ್ರತಿಭೆಗಳು ಜಾಹೀರಾತು ಸರಕು ಅಷ್ಟೇ. ಅಲ್ಲಿ ಶಿಕ್ಷಣ ಒಂದು ವ್ಯಾಪಾರ ಅಷ್ಟೇ. ಮಕ್ಕಳನ್ನು ಉದ್ಯೋಗಕ್ಕೆ ಅಥವಾ ಉದ್ಯಮಕ್ಕೆ ಪ್ರಿಪೇರ್ ಮಾಡುವ ಕಾರ್ಖಾನೆಗಳು ಅವು.

ಅಲ್ಲಿ ಎಲ್ಲ ಸ್ಪರ್ಧೆಗಳಿಗೆ ಶಾಲೆಯ ಮಕ್ಕಳನ್ನು ತರಬೇತಿ ಮಾಡಲು ಅಂತಾರಾಷ್ಟ್ರೀಯ ಮಟ್ಟದ ಕೋಚ್ ಇರುತ್ತಾರೆ. ಒಂದೊಂದು ಟ್ಯಾಲೆಂಟನ್ನು ಸಪೋರ್ಟ್ ಮಾಡಲು ದೊಡ್ಡ ಮೆಂಟರ್ ಇರುತ್ತಾರೆ. ಆದರೆ ಸೋಲುವ ದಾರಿಯಲ್ಲಿ ತಪ್ಪಿ ಕೂಡ ಈ ಮಕ್ಕಳು ಹೋಗುವುದಿಲ್ಲ. ಅವರು ಹೋಗಲು ಆಸೆಪಟ್ಟರೂ ಹೆತ್ತವರು ಬಿಡುವುದಿಲ್ಲ. ಈ ನಿಯಮಕ್ಕೆ ಕೂಡ ಅಪವಾದಗಳು ಖಂಡಿತ ಇರಬಹುದು. ಆದರೆ ಮೆಜಾರಿಟಿ ನೋಡಿದಾಗ ನಾನು ಮೇಲೆ ಹೇಳಿದ್ದು ತುಂಬಾ ಸತ್ಯ ಆಗಿರುತ್ತದೆ.

ಕೊಳಚೆಗೇರಿಯಲ್ಲಿಯೂ ಕನಸುಗಳು ಮೊಳೆಯುತ್ತವೆ

ನಾನು ಅತ್ಯಂತ ಸಹಜವಾದ ಕುತೂಹಲದಿಂದ ಹಲವಾರು ಕೊಳಚೆಗೇರಿ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. 10×10 ಚದರಡಿ ವಿಸ್ತೀರ್ಣದ ಸಣ್ಣ ಸಣ್ಣ ಉಸಿರು ಕಟ್ಟುವ ಗುಡಿಸಲುಗಳಲ್ಲಿ ವಾಸ ಮಾಡುವ ಆ ಹೆತ್ತವರೂ ತಮ್ಮ ಮಕ್ಕಳ ಬಗ್ಗೆ ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅದನ್ನು ಪದೇಪದೆ ಹೇಳಿ ಕನಸುಗಳನ್ನು ಅವರ ಮಕ್ಕಳ ಸುಪ್ತ ಮನಸ್ಸುಗಳಿಗೆ ದಾಟಿಸುತ್ತಾರೆ. ಆ ಮಕ್ಕಳೂ ತಮ್ಮದೇ ಆದ ಕನಸುಗಳನ್ನು ಹೊಂದಿರುತ್ತಾರೆ. ಅವರಿಗೆ ಸೌಕರ್ಯಗಳ ಕೊರತೆ ಕಾಡುವುದೆ ಇಲ್ಲ. ಅವಕಾಶಗಳ ಕೊರತೆ ಬಗ್ಗೆ ಅವರು ಗೊಣಗುವುದೂ ಇಲ್ಲ.

ಸರಕಾರಿ ಶಾಲೆಗಳು ಭೂಲೋಕದ ಸ್ವರ್ಗ ಅವರಿಗೆ

ಅವರ ಕನಸುಗಳನ್ನು ಬೆಳೆಸುವ ಸರಕಾರಿ ಶಾಲೆಗಳು ಇವೆ. ಆ ಶಾಲೆಗಳಲ್ಲಿ ಕೂಡ ಪರಿಣತ ಮತ್ತು ಶ್ರೇಷ್ಠ ತರಬೇತು ಪಡೆದ ಶಿಕ್ಷಕರು ಇರುತ್ತಾರೆ. (ಶಿಕ್ಷಕರ ಕೊರತೆ ಇದೆ ಎಂಬ ದೂರುಗಳೂ ಇವೆ). ಮಕ್ಕಳಿಗೆ ಪ್ರತಿಭಾ ಕಾರಂಜಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟಗಳು ಅಲ್ಲಿ ಇರುತ್ತವೆ. ಒಂದಿಷ್ಟು ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಸಂಗೀತ, ನಾಟಕ ತರಬೇತಿಗಳು ಇತ್ತೀಚೆಗೆ ಆರಂಭವಾಗಿವೆ. ಶಾಲೆಯ ವಾರ್ಷಿಕೋತ್ಸವ ಇರುತ್ತದೆ. ಅದರಿಂದಾಗಿ ಮಕ್ಕಳು ಉತ್ಸಾಹದಲ್ಲಿ ಕ್ರಿಯಾಶೀಲವಾಗಿ ಅರಳುತ್ತಾರೆ.

ಭರತವಾಕ್ಯ

ತೀವ್ರ ಬಡತನ, ಹಸಿವು, ಅಪಮಾನಗಳ ನಡುವೆ ಕೂಡ ಸಾಧನೆಯನ್ನು ಮಾಡಿ ಎದ್ದು ನಿಂತ ನೂರಾರು ಮಕ್ಕಳ ಪ್ರತಿಭೆಗಳನ್ನು ಗಮನಿಸಿ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ. ಆರ್ಥಿಕವಾಗಿ ಸಬಲರಲ್ಲದ ಇಂತಹ ಮಕ್ಕಳಿಗೆ ಒಂದಿಷ್ಟು ಧೈರ್ಯವನ್ನು ತುಂಬಿದರೆ, ಸಣ್ಣಗೆ ಒಂದು ಸಪೋರ್ಟ್ ಸಿಸ್ಟಮ್ ರೂಪಿಸಿದರೆ, ಒಂದಿಷ್ಟು ಮೆಂಟರಿಂಗ್ ಮಾಡಿದರೆ, ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಕರು ಆ ಮಕ್ಕಳನ್ನು ಪ್ರೀತಿ ಮಾಡಿದರೆ ಆ ದೇವರ ಮಕ್ಕಳು ಕೂಡ ಅದ್ಭುತಗಳನ್ನು ಸಾಧಿಸುತ್ತಾರೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಸಾಧನೆ ಮಾಡಿದ ನಂತರ ತಮ್ಮ ಸರಕಾರಿ ಶಾಲೆಗಳ, ಶಿಕ್ಷಕರ ನೆರವಿಗೆ ನಿಲ್ಲುವವರು ಇಂತಹ ಮಕ್ಕಳೇ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top