ಶಬರಿಮಲೆ : ಅಯ್ಯಪ್ಪ ವ್ರತಧಾರಿಯೊಬ್ಬರು ಶಬರಿಮಲೆ ಸನ್ನಿಧಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಅಯ್ಯಪ್ಪ ಭಕ್ತನನ್ನು ಕರ್ನಾಟಕದ ಕನಕಪುರ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ.
ಕುಮಾರಸ್ವಾಮಿ ಸಾವಿರಾರು ಭಕ್ತರ ಮುಂದೆಯೇ ಮಾಳಿಗೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಪ್ಪದ ಅಭಿಷೇಕ ಕೌಂಟರ್ ಮಂಟಪದ ಮೇಲಿನಿಂದ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವೀಡಿಯೊ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಈಗ ವೈರಲ್ ಆಗಿದೆ.
ಶಬರಿಮಲೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿರುವಾಗ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಜಿಗಿದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿದ್ದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.