ಅಡಿಕೆ ಮೇಲಿನ ಕಳಂಕ ನಿವಾರಿಸಲು ಮುಂದಾದ ಕೇಂದ್ರ ಸರಕಾರ

ಅಡಿಕೆಯಿಂದ ಕ್ಯಾನ್ಸರ್‌ ಉಂಟಾಗುತ್ತದಯೇ ಎಂಬುದರ ಬಗ್ಗೆ ಸಮಗ್ರ ಅಧ್ಯಯನ

ಮಂಗಳೂರು : ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಉತ್ಪನ್ನ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಲು ಕೇಂದ್ರ ಸರಕಾರ ಮುಂದಾಗಿದೆ. ಅಡಿಕೆಯ ಆರೋಗ್ಯ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರವೇ ಸಮಗ್ರ ಅಧ್ಯಯನ ನಡೆಸಲಿದೆ. 10 ಕೋಟಿ ರೂ.ಯನ್ನು ಈ ಅಧ್ಯಯನಕ್ಕಾಗಿ ಕೇಂದ್ರ ಸರಕಾರ ಕೊಡಲಿದೆ.

ಕಾಸರಗೋಡಿನಲ್ಲಿರುವ ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌ (ಐಸಿಎಆರ್‌) ಇದರಡಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಅಧ್ಯಯನದ ನೇತೃತ್ವ ವಹಿಸಿಕೊಳ್ಳಲಿದೆ. ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್‌ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇಶದ ಪ್ರತಿಷ್ಠಿತ ಏಮ್ಸ್‌ನಂತಹ 16 ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಂಸ್ಥೆಗಳ ಮೂಲಕ ಅಡಿಕೆ ಬಗ್ಗೆ ವಿಸ್ತೃತ ಅಧ್ಯಯನ ನಡೆಯಲಿದೆ. ಮೂರು ವರ್ಷದಲ್ಲಿ ಅಧ್ಯಯನ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.































 
 

ವಿಶ್ವ ಆರೋಗ್ಯ ಸಂಸ್ಥೆಗೆ ಇದುವರೆಗೆ ಸಲ್ಲಿಕೆಯಾದ ಅಡಿಕೆ ಕುರಿತ ಅಧ್ಯಯನ ವರದಿಯಲ್ಲಿ ಗುಟ್ಕಾ ಅಥವಾ ತಂಬಾಕು ಸಹಿತ ಅಡಿಕೆ ಬಗ್ಗೆ ನಡೆಸಿದ ಅಧ್ಯಯನ ವರದಿ ಇದೆ. ಅದರ ಆಧಾರದಲ್ಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಷರಾ ಬರೆಯಲಾಗಿದೆ. ಇದೇ ಮೊದಲ ಬಾರಿಗೆ ಬರೇ ಅಡಿಕೆ ಹಾಗೂ ಅದರ ಸೇವನೆ ಕುರಿತು ಸಮಗ್ರ ಅಧ್ಯಯನ ನಡೆಯಲಿದೆ.

ಮೊದಲ ಹಂತದಲ್ಲಿ ಅಡಿಕೆಯ ಸ್ಯಾಂಪಲ್‌ ಪಡೆದುಕೊಂಡು ಅಧ್ಯಯನ ನಡೆಯಲಿದೆ. ಬರೇ ಅಡಿಕೆ, ಅಡಿಕೆ ತಿನ್ನುವವರ ಮೇಲೆ ಪ್ರಯೋಗಾಲಯ ಪರೀಕ್ಷೆಯೂ ನಡೆಯಲಿದೆ. ದಂತ ವೈದ್ಯಕೀಯ ಆಸ್ಪತ್ರೆಗಳಲ್ಲಿ ಅಡಿಕೆ ತಿನ್ನುವುದರಿಂದ ಹಾಗೂ ಅಡಿಕೆ ಸಹಿತ ಕೆಮಿಕಲ್ ಮಿಶ್ರಣದ ಗುಟ್ಕಾ ಸೇವಿಸುವುದರಿಂದ ದಂತ ಕ್ಯಾನ್ಸರ್‌ ಸಂಭವಿಸಿರುವ ಬಗ್ಗೆಯೂ ಅಧ್ಯಯನ ನಡೆಯಲಿದೆ. ದೇಶಾದ್ಯಂತ ವಿವಿಧ ಕಡೆಗಳಲ್ಲಿ ಅಡಿಕೆಯ ಆರೋಗ್ಯ ಪರಿಣಾಮದ ವಿವಿಧ ಹಂತಗಳು ಅಧ್ಯಯನಕ್ಕೆ ಒಳಪಡಲಿದೆ. ಮುಂದಿನ ಹಂತಗಳಲ್ಲಿ ಇಲಿ, ಹಲ್ಲಿ ಮುಂತಾದವುಗಳ ಮೇಲೆ ಕ್ಲಿನಿಕಲ್‌ ಪ್ರಯೋಗ ನಡೆಯಲಿದೆ. ಕೊನೆ ಹಂತದಲ್ಲಿ ಸಮಗ್ರ ಅಧ್ಯಯನ ನಡೆದು ಅಡಿಕೆಯ ಆರೋಗ್ಯ ಪರಿಣಾಮ ಜಾಗತಿಕವಾಗಿ ಪ್ರಕಟವಾಗಲಿದೆ.

ಅಡಿಕೆ ಆರೋಗ್ಯ ಪರಿಣಾಮ ಅರಿಯಲು ಕ್ಯಾಂಪ್ಕೋ ಸೇರಿದಂತೆ ವಿವಿಧ ಬೆಳೆಗಾರ ಸಂಘಟನೆಗಳು ಮತ್ತು ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಕೂಡ ಕಳೆದ ನಾಲ್ಕೈದು ವರ್ಷಗಳಿಂದಲೇ ಅವಿರತ ಶ್ರಮದಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ಕೇಂದ್ರ ಸಹಾಯಕ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಈ ಬಗ್ಗೆ ಮನದಟ್ಟು ಮಾಡುವ ಪ್ರಯತ್ನ ನಡೆಸಿದೆ. ಇಲ್ಲಿವರೆಗೆ ಬರೀ ಅಡಿಕೆಯ ಬಗ್ಗೆ ಅಧ್ಯಯನ ನಡೆದಿಲ್ಲ ಎಂಬುದನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ಮನದಟ್ಟು ಮಾಡಲು ಯತ್ನಿಸಲಾಗಿದೆ. ಅದರ ಫಲವಾಗಿ ಅಡಿಕೆಯ ಸಮಗ್ರ ಅಧ್ಯಯನಕ್ಕೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top