ವಕ್ಫ್‌ ವರದಿ ಬಹಿರಂಗಪಡಿಸದಂತೆ ಲಂಚದ ಆಮಿಷವೊಡ್ಡಿದ್ದು ಕಾಂಗ್ರೆಸ್ಸಿನವರು : ಅನ್ವರ್‌ ಮಾಣಿಪ್ಪಾಡಿ ಸ್ಪಷ್ಟನೆ

ವಿಜಯೇಂದ್ರ ಮೇಲೆ ಮಾಡಿದ ಆರೋಪ ಕಾಂಗ್ರೆಸ್‌ಗೆ ತಿರುಗುಬಾಣ

ಮಂಗಳೂರು : ವಕ್ಫ್​ ಆಸ್ತಿ ಕಬಳಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ‌ ಅಧ್ಯಕ್ಷ ಅನ್ವರ್​ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅನ್ವರ್‌ ಮಾಣಿಪ್ಪಾಡಿ, ಸಿದ್ದರಾಮಯ್ಯ ಹೇಳಿರುವುದು ಶೇ.90 ಸುಳ್ಳು. ಕಾಂಗ್ರೆಸ್​ನವರೇ ಲಂಚದ ಆಮಿಷವೊಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿ.ವೈ.ವಿಜಯೇಂದ್ರ ನನಗೆ ಯಾವುದೇ ಲಂಚದ ಅಮಿಷವೊಡ್ಡಿಲ್ಲ. 2012-13ರಲ್ಲಿ ವಿಜಯೇಂದ್ರ ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ಅಂದು ಕಾಂಗ್ರೆಸ್​ನ ಸಾಕಷ್ಟು ಜನರು ಲಂಚದ ಅಮಿಷವೊಡ್ಡಿದ್ದರು. ವರದಿ ಜಾರಿ ಮಾಡಲು ಬಿಜೆಪಿ ಮುಂದಾಗಿದ್ದು ನಿಜ. ಪ್ರಧಾನಮಂತ್ರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೆ. ಆದರೆ ಬಿಜೆಪಿಯಿಂದ ನನಗೆ ಯಾವುದೇ ಲಂಚದ ಅಮಿಷ ಬಂದಿಲ್ಲ. ವರದಿ ಅನುಸಾರ ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ಸಿಗರ ಬುಡಕ್ಕೆ ಬರುತ್ತೆ. ಹೀಗಾಗಿ ಈ ವಿಚಾರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿಎಂ, ಪ್ರಿಯಾಂಕ್​ ಖರ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಲಂಚದ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಿದ್ದರಾಮಯ್ಯ ಹೇಳಿದ್ದಾರೆ. ಕೊಡಲಿ. 1.60 ಸಾವಿರ ಹೆಕ್ಟೆರ್‌ ವಕ್ಫ್‌ ಆಸ್ತಿ ಎಂದು ನೋಟಿಸ್ ಕೊಟ್ಟಿದ್ದಾರೆ. ವಕ್ಫ್‌ ಬೋರ್ಡ್​ ಆಸ್ತಿ ಇರುವುದು 54 ಸಾವಿರ ಹೆಕ್ಟರ್​. 27ರಿಂದ 28 ಸಾವಿರ ಹೆಕ್ಟರ್​ ಜಮೀನು ಕಬಳಿಕೆ ಆಗಿದೆ. 1.60 ಸಾವಿರ ಹೆಕ್ಟರ್​ ಜಮೀನು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ನಾನು‌ ಅಧಿಕಾರ ಸ್ವೀಕರಿಸಿದ ಸಂದರ್ಭ ಆಸ್ತಿಯ ಸಬ್‌ರಿಜಿಸ್ಟ್ರರ್ ವ್ಯಾಲ್ಯೂ 2 ಲಕ್ಷದ 30 ಸಾವಿರ ಕೋಟಿ ಆಗಿತ್ತು. ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರ ಕೇವಲ ರೈತರ ಆಸ್ತಿಗಳಿಗೆ ಮಾತ್ರ ಹೇಗೆ ನೋಟೀಸ್ ಕೊಟ್ಟರು. ಇದು ಸತ್ಯ ಆಗಿದ್ದರೆ ಹೇಗೆ ವಾಪಾಸು ಪಡೆದುಕೊಂಡರು? ಇದು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಒಬ್ಬರಿಗೊಬ್ಬರು ಹೊಡೆದುಕೊಳ್ಳುವಂತೆ ಮಾಡಿದ್ದಲ್ವಾ? ನಾನು ನೀಡಿದ ವರದಿ ಹೈಕೋರ್ಟ್, ಸುಪ್ರೀಂ ಕೋರ್ಟ್, ಲೋಕಾಯುಕ್ತದಲ್ಲಿ ಗೆದ್ದಿದೆ. ಆ ವರದಿಯನ್ನು ಮೊದಲು ತನಿಖೆಗೆ ತೆಗೆದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಅಗ್ರಹಿಸಿದ್ದಾರೆ.































 
 

ನನ್ನ ವರದಿಯ ಬಗ್ಗೆ ತನಿಖೆ ಮಾಡಿದರೆ ಬಹಳಷ್ಟು ಜನ ಜೈಲಿಗೆ ಹೋಗುತ್ತಾರೆ. ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟೊಂದು ಪ್ರೀತಿ ಇದ್ದರೆ ನನ್ನ ವರದಿಯ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಎನ್.ಎ. ಹ್ಯಾರಿಸ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿನ 24 ಎಕರೆ ಭೂಮಿ ತನ್ನದಾಗಿಸಿಕೊಂಡಿದ್ದಾರೆ. ತನ್ನ ಹೆಂಡತಿ ಮತ್ತು ತಾಯಿಯ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ರೆಹಮಾನ್ ಖಾನ್ ತನ್ನ ಅಧಿಕಾರ ಬಳಸಿಕೊಂಡು ದೊಡ್ಡ ಆಸ್ತಿಗಳನ್ನು ಯಾರು ಯಾರಿಗೂ ಕೊಟ್ಟಿದ್ದಾರೆ. ವರದಿ ಇಟ್ಟುಕೊಂಡು ತನಿಖೆ ಮಾಡಿದರೆ ರೈತರ ಆಸ್ತಿ ಎಷ್ಟು? ವಕ್ಫ್ ಆಸ್ತಿ ಎಷ್ಟೆಂದು ಗೊತ್ತಾಗುತ್ತೆ. ಹೀಗಾದ್ರೆ ಯಾವ ಹೋರಾಟವೂ ಅಗತ್ಯವಿಲ್ಲ. ಹಣ ಬಲ, ತೋಲ್ಬಳದಿಂದ ಈ ವರದಿಯ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಬಿಜೆಪಿಗೆ ಈಗ ಬೇರೆ ದಾರಿಯಿಲ್ಲದೇ ಹೋರಾಟ ಮಾಡ್ತಿದೆ. ಹೋರಾಟ ಮಾಡದಿದ್ದರೆ ಜನ ತಪ್ಪು ತಿಳಿದುಕೊಳ್ಳುತ್ತಿದ್ದಾರೆಂದು ಹೋರಾಟ ಮಾಡ್ತಿದೆ. ಇವತ್ತಲ್ಲ ನಾಳೆ ಇದೆಲ್ಲವೂ ಹೊರಗಡೆ ಬರುತ್ತೆ. ಕಳ್ಳರು ಒಂದಿನ ಒಳಗಡೆ ಹೋಗುತ್ತಾರೆ ಎಂದರು.

ಈ ವರದಿ ಬಗ್ಗೆ ತನಿಖೆಗೆ ಜಾರಿಗೆ ಪ್ರಧಾನಿಯವರನ್ನು ಸಹ ಭೇಟಿ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಗಮನ ಹರಿಸೋದಾಗಿ ಹೇಳಿದ್ದಾರೆ. ಈ ವರದಿ ನೋಡಿದ ಬಳಿಕ‌ ಕೇಂದ್ರ ಸರ್ಕಾರವೂ ಕಣ್ತೆರೆದಿದೆ. ನನ್ನ ವರದಿಯಲ್ಲಿ 10 ಸಾವಿರ ಪುಟಗಳ ಸಾಕ್ಷಿಗಳ ದಾಖಲೆಗಳನ್ನು ಸಹ ಒದಗಿಸಿದ್ದೇನೆ. ಸಿದ್ದರಾಮಯ್ಯನವರು ಅವರದ್ದೇ ದಾರಿಯಲ್ಲಿ ಹೋಗ್ತಿದ್ದಾರೆ. ಪ್ರಾಯಶಃ ಅವರು ಭೂಮಿ‌ ಮೇಲೆ ನಡೆಯುತ್ತಿಲ್ಲ. ಎಲ್ಲೋ ಮೇಲೆ ಹಾರಾಡುತ್ತಿದ್ದಾರೆ, ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಬೇಡದ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಸಲ‌ ಹೇಳಿದ್ದೇನೆ ಅವರು ಅರ್ಥ ಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ನನ್ನ ವರದಿಯನ್ನು ಸಿಬಿಐಗೆ ಕೊಟ್ಟು ಸಂಪೂರ್ಣವಾಗಿ ತನಿಖೆ ಮಾಡಿಸಿ. ಆಗ ಹಾಲಿಗೆ ಹಾಲು ನೀರಿಗೆ ನೀರು ಬೇರೆಯಾಗುತ್ತೆ. ರೈತರ ಭೂಮಿ ಯಾವುದು, ವಕ್ಫ್ ಆಸ್ತಿ ಯಾವುದೆಂದು ಗೊತ್ತಾಗುತ್ತೆ ಎಂದು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top