ಪುತ್ತೂರು: ವೇತನ ಪಾವತಿ ವಿಳಂಬ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳ ನಡೆಯನ್ನು ವಿರೋಧಿಸಿ ಪುತ್ತೂರು ಕೆಎಸ್ ಆರ್ ಟಿಸಿ ಹೊರಗುತ್ತಿಗೆ ಚಾಲಕರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಮುಷ್ಕರದ ಪರಿಣಾಮ ಪ್ರಯಾಣಿಕರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಹತ್ತು ಮಂದಿ ಚಾಲಕರು ಪನ್ನಗ ಮತ್ತು ಪೂಜಾಯ ಸೆಕ್ಯುರಿಟೀಸ್ ಎಂಬ ಸಂಸ್ಥೆಯ ಅಧೀನದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮಗೆ ನೀಡುವ ವೇತನದಲ್ಲಿ ಪ್ರತಿ ತಿಂಗಳು ಒಬ್ಬೊಬ್ಬರಿಂದ 3000 ದಿಂದ 5000 ತನಕ ಕಡಿತ ಮಾಡುತ್ತಿದ್ದಾರೆ. ಕಡಿತ ಮಾಡದಂತೆ ಹಲವು ಬಾರಿ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ಮೊತ್ತವನ್ನು ಹಿಂತಿರುಗಿಸುವಂತೆ ತಿಳಿಸಲಾಗಿದೆ. ಆದರೆ ಮನವಿ ಮಾಡಿ ಹಲವು ತಿಂಗಳು ಕಳೆದರೂ ಹಿಂತಿರುಗಿಸಿರುವುದಿಲ್ಲ.
ಈ ನಿಟ್ಟಿನಲ್ಲಿ ಡಿ.15ರಿಂದ ನಾವು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಲಿದ್ದೇವೆ. ಕೆಲವು ಚಾಲಕರು ಡಿ.13ರ ಸಂಜೆಯಿಂದಲೇ ಮುಷ್ಕರ ನಿರತರಾಗಿದ್ದು ಡಿ.14ರ ಸಂಜೆಯಿಂದ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವ ಹಿಸುವ ಚಾಲಕರೆಲ್ಲರೂ ಮುಷ್ಕರ ನಡೆಸಲಿದ್ದೇವೆ. ನಮ್ಮ ವೇತನದಿಂದ ಕಡಿತ ಮಾಡಿದ ಮೊತ್ತವನ್ನು ನಮಗೆ ಹಿಂತಿರುಗಿಸುವ ತನಕ ಮುಷ್ಕರ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.