ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ!

ಕಸದ ಕೊಂಪೆ ಆಗುತ್ತಾ ಇದೆ ಭಾರತ

ನಮ್ಮ ಪ್ರಧಾನಮಂತ್ರಿ ಮೋದಿಜಿ ಅವರು ಸ್ವಚ್ಛ ಭಾರತದ ಅಭಿಯಾನಕ್ಕೆ ಕರೆ ನೀಡಿದರು. ಅದನ್ನು ಅವರು ನೂರಕ್ಕೆ ನೂರರಷ್ಟು ಪಾಲಿಸಿದರು. ಸ್ವತಃ ಪ್ರಧಾನಿ ರಸ್ತೆಗೆ ಬಂದು ಕಸಬರಿಕೆ ಹಿಡಿದು ಕಸ ಗುಡಿಸಿದರು. ಗಾಂಧೀಜಿಯವರ ಅತಿದೊಡ್ಡ ಕನಸಿನ ಅಭಿಯಾನಕ್ಕೆ ಚಾಲನೆ ನೀಡಿದರು.

ಆದರೆ ಭಾರತ ಬದಲಾಯಿತಾ?































 
 

1) ಭಾರತದ 120 ಕೋಟಿ ಜನರಲ್ಲಿ ಅರ್ಧಾಂಶ ಜನ ಮಾತ್ರ ಶೌಚಾಲಯ ಬಳಸುತ್ತಾರೆ.

2) ವಾರ್ಷಿಕ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1.86 ಲಕ್ಷ ಮಕ್ಕಳು ಭಾರತದಲ್ಲಿ ಕಲುಷಿತ ನೀರಿನ ಬಳಕೆಯಿಂದ ಸಾಯುತ್ತಾರೆ.

3) ಸ್ವಚ್ಛತೆಯ ಲೋಪದ ಕಾರಣಕ್ಕೆ ಭಾರತದ ರಾಷ್ಟ್ರೀಯ ಉತ್ಪನ್ನದಲ್ಲಿ ಶೇಕಡ 6.5 ಪ್ರತಿವರ್ಷ ನಷ್ಟ ಆಗ್ತಾ ಇದೆ.

4) ದೇಶದ 11.3 ಕೋಟಿ ಜನರಿಗೆ ಶೌಚಾಲಯ ಇಲ್ಲ.

5) ದೇಶದ ಶೇ.10 ಶಾಲೆಗಳಲ್ಲಿ ಶೌಚಾಲಯ ಇಲ್ಲ.

6) ದೇಶದಲ್ಲಿ ಊಟಕ್ಕೂ ಮೊದಲು ಕೈ ತೊಳೆಯುವವರ ಸಂಖ್ಯೆ ಶೇ.53 ಮಾತ್ರ.

7) ದೇಶದಲ್ಲಿ ಪ್ರತಿ ನಿಮಿಷಕ್ಕೆ 11 ಲಕ್ಷ ಲೀಟರ್ ಮಲಿನ ನೀರು ಗಂಗೆಯನ್ನು ಸೇರುತ್ತಿದೆ.

ಈ ಅಂಕಿ ಅಂಶಗಳನ್ನು ಮೀರಿ…

ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡಿ ಮತ್ತೆ ಸ್ವಚ್ಛ ಮಾಡುವುದು ಸ್ವಚ್ಛತಾ ಪ್ರಜ್ಞೆ ಅಲ್ಲ. ಕಸವನ್ನು ಹಾಕದಿರುವುದು ಸ್ವಚ್ಛತಾ ಪ್ರಜ್ಞೆ. ಅದಕ್ಕೆ ಬೇಕಾದದ್ದು ಬ್ಯಾನರ್ ಕಾರ್ಯಕ್ರಮಗಳು ಅಲ್ಲ. ಅದಕ್ಕೆ ಅಗತ್ಯವಾದದ್ದು ಸ್ವಯಂ ನಿಯಂತ್ರಣ.

ಸ್ವಚ್ಛತೆ ದೈವಿಕತೆಗೆ ಹತ್ತಿರ ಎಂದಿದ್ದರು ಗಾಂಧೀಜಿ. ಆದರೆ ನಮ್ಮಲ್ಲಿ ಹೆಚ್ಚಿನವರು ಮಾಡುವ ಅಕೃತ್ಯಗಳಿಂದ ಭಾರತ ಇಂದಿಗೂ ಕಸದ ಕೊಂಪೆ ಆಗಿ ಉಳಿದಿದೆ.

ಸ್ವಚ್ಛತೆ ಒಂದು ಸಂಸ್ಕೃತಿ ಆಗಬೇಕು

ನನ್ನ ಗೆಳೆಯರೊಬ್ಬರು ಅಮೆರಿಕದಿಂದ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಲ್ಲಿ ಒಂದು ಐಸ್‌ಕ್ರೀಮ್ ತೆಗೆದುಕೊಂಡು ಅದನ್ನು ಸವಿಯುತ್ತ ರಸ್ತೆಯ ಉದ್ದಕ್ಕೂ ತುಂಬಾ ದೂರ ನಾವು ಮಾತಾಡುತ್ತ ನಡೆದೆವು. ಅವರ ಕೈಯ್ಯಲ್ಲಿ ಇದ್ದ ಐಸ್‌ಕ್ರೀಮ್ ಕಪ್ ಖಾಲಿ ಆಗಿತ್ತು. ಅವರು ಸುತ್ತಮುತ್ತ ದೃಷ್ಟಿ ಹಾಯಿಸುತ್ತ ಇನ್ನಷ್ಟು ದೂರ ನಡೆದರು. ಕೊನೆಗೆ ಅವರು ನನ್ನಲ್ಲಿ ಕೇಳಿದ ಪ್ರಶ್ನೆ, ಈ ಕಪ್ ಎಲ್ಲಿ ಎಸೆಯಲಿ?

ಅವರಿಗೆ ಆ ಐಸ್‌ಕ್ರೀಮ್ ಕಪ್ಪನ್ನು ಎಸೆಯಲು ಆ ರಸ್ತೆಯುದ್ದಕ್ಕೂ ಒಂದು ಸರಿಯಾದ ಜಾಗವನ್ನು ಅಲ್ಲಿನ ಮಹಾನಗರ ಪಾಲಿಕೆಯು ವ್ಯವಸ್ಥೆ ಮಾಡಿರಲಿಲ್ಲ.
ಸ್ವಚ್ಛತೆ ಒಂದು ಸಂಸ್ಕೃತಿ, ಅದು ಕಾನೂನಿನಿಂದ ಖಂಡಿತ ಬರುವುದಿಲ್ಲ

ಭಾರತೀಯರ ಸಣ್ಣತನಗಳು

1) ನಮ್ಮ ಮನೆಯ ಕಸವನ್ನು ಮೂಲದಲ್ಲಿಯೇ ವಿಂಗಡನೆ ಮಾಡಿ ಅದನ್ನು ಪುರಸಭೆ, ನಗರಸಭೆ, ಪಾಲಿಕೆ ಮೊದಲಾದ ಸ್ಥಳೀಯಾಡಳಿಗಳ ವಾಹನಗಳಿಗೆ ಕೊಡುವ ವ್ಯವಸ್ಥೆ ಇದೆ. ಅದನ್ನು ಅವರು ನಗರದ ಹೊರಗೆ ತೆಗೆದುಕೊಂಡು ಹೋಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಾರೆ. ಆದರೆ ಮೂಲದಲ್ಲಿಯೇ ಪ್ರತ್ಯೇಕ ಮಾಡುವ ಸಣ್ಣ ಕೆಲಸವನ್ನು ನಾವು ಮಾಡುವುದಿಲ್ಲ. ಶಾಲಾ ಕಾಲೇಜು ಮಕ್ಕಳಿಗೆ ತ್ಯಾಜ್ಯ ನಿರ್ವಹಣೆ ಮಾಡುವ ಶಿಕ್ಷಣ ಕೂಡ ಇಂದು ಸರಿಯಾಗಿ ದೊರೆಯುತ್ತಿಲ್ಲ.

2) ಪ್ಲಾಸ್ಟಿಕ್ ನಿಷೇಧ ಕಾನೂನು ಕಡತದಲ್ಲಿ ಇದೆ. ಆದರೆ ಸ್ಥಳೀಯಾಡಳಿಗಳು ಚಾಪೆಯ ಕೆಳಗೆ ನುಸುಳಿದರೆ ವ್ಯಾಪಾರಿಗಳು ರಂಗೋಲಿಯ ಕೆಳಗೆ ನುಸುಳುತ್ತಾರೆ. ಅಂಗಡಿಗೆ ಹೋಗುವಾಗ ಒಂದು ಸಣ್ಣ ಬಟ್ಟೆಯ ಚೀಲ ತೆಗೆದುಕೊಂಡು ಹೋಗಲು ನಾವು ಇನ್ನೂ ಉದಾಸೀನ ಮಾಡುತ್ತೇವೆ.

3) ಬೆಳಗಾಂ, ಬಳ್ಳಾರಿ, ಬೀದರ್ ಮೊದಲಾದ ಜಿಲ್ಲೆಗಳ ಹಲವು ಕಡೆ ಸರಕಾರಗಳು ಸಾರ್ವಜನಿಕರಿಗೆ ಉಚಿತವಾದ ಶೌಚಾಲಯ ಕಟ್ಟಿಸಿಕೊಟ್ಟಿವೆ. ಆದರೆ ಆ ಕುಟುಂಬಗಳ ಹಲವರು ಇನ್ನೂ ಚೆಂಬು ಹಿಡಿದುಕೊಂಡು ಬಯಲಿಗೆ ಹೋಗುತ್ತಿದ್ದಾರೆ ಅನ್ನುತ್ತದೆ ವರದಿ.

4) ಗಂಗಾನದಿಯ ದಡದಲ್ಲಿ ಹೆಣಗಳನ್ನು ಸುಡುವವರು ಕಟ್ಟಿಗೆ ಉಳಿಸಲು ಅರ್ಧ ಮಾತ್ರ ಸುಟ್ಟು ಆ ಹೆಣಗಳನ್ನು ಗಂಗಾನದಿಗೆ ಎಸೆಯುತ್ತಾರೆ. ಹೀಗೆ ಗಂಗಾನದಿಗೆ ಪ್ರತಿನಿತ್ಯ ಅರ್ಪಣೆ ಆಗುವ ಅರ್ಧ ಸುಟ್ಟ ಹೆಣಗಳ ಸಂಖ್ಯೆ ಸಾವಿರ ಸಾವಿರ ಇದೆ.

5) ನಗರಗಳಲ್ಲಿ ಶೌಚಾಲಯಕ್ಕೆ ಕೊಡುವ ಎರಡು ರೂಪಾಯಿ ಉಳಿಸಲು ಶೌಚಾಲಯದ ಹೊರಗೆ ಮೂತ್ರ ಹೊಯ್ಯುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ.

6) ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಮಂದಿಗೆ ವಿದೇಶಗಳಲ್ಲಿ ಕಠಿಣವಾದ ಶಿಕ್ಷೆ ಇದೆ. ಭಾರತದಲ್ಲಿ ಅದಕ್ಕಾಗಿ ಇರುವ ಕಾನೂನು ಹಲ್ಲಿಲ್ಲದ ಹಾವು ಆಗಿದೆ. ಆ ಕಾನೂನನ್ನು ಉದ್ದೇಶಪೂರ್ವಕ ಆಗಿ ಮುರಿಯುವ ನಿಸ್ಸೀಮರು ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂಥವರನ್ನು ಪತ್ತೆ ಹಚ್ಚಲು ಸರಕಾರಗಳು ಅಳವಡಿಕೆ ಮಾಡಿದ ಸಿಸಿ ಕ್ಯಾಮರಾ ಕೆಳಗೇ ಕಸ ತಂದು ಸುರಿಯುವವರಿದ್ದಾರೆ.

7) ಭಾರತದಲ್ಲಿ ಅತಿದೊಡ್ಡ ಸಮಸ್ಯೆ ಎಂದರೆ ನಗರಗಳ ಘನ ತ್ಯಾಜ್ಯ ನಿರ್ವಹಣೆ. ನಗರಗಳ ಹೊರ ಪ್ರದೇಶಗಳಲ್ಲಿ ಡಂಪಿಂಗ್ ಯಾರ್ಡ್‌ಗಳನ್ನು ಗುರುತಿಸಿ ನಗರದ ಘನ ತ್ಯಾಜ್ಯಗಳನ್ನು ತಂದು ಅಲ್ಲಿ ಸುರಿಯುತ್ತಾರೆ. ಆದರೆ ನಗರಗಳು ಬೆಳೆದಂತೆ ಆ ಡಂಪಿಂಗ್ ಯಾರ್ಡ್‌ಗಳು ನಗರಗಳ ಒಳಗೆ ಬಂದಿವೆ ಮತ್ತು ಡಂಪಿಂಗ್ ಯಾರ್ಡ್‌ಗಳ ಸುತ್ತ ಕೊಳಚೆಗೇರಿಗಳು ನಿರ್ಮಾಣ ಆಗಿವೆ. ಸಮಸ್ಯೆಗಳು ಉಲ್ಬಣ ಆಗುತ್ತಾ ಹೋಗುತ್ತಿವೆ.

8) ನಮಗೆ ಇಂದು ಬಹುದೊಡ್ಡ ಸವಾಲು ಆಗಿರುವುದು ಎಲೆಕ್ಟ್ರಾನಿಕ್ ವೇಸ್ಟ್‌ಗಳು ಮತ್ತು ಮೆಡಿಕಲ್ ವೇಸ್ಟ್‌ಗಳು. ಅದರಲ್ಲಿಯೂ ಆಸ್ಪತ್ರೆಗಳಲ್ಲಿ ಉಂಟಾಗುವ ಮೆಡಿಕಲ್ ತ್ಯಾಜ್ಯಗಳ ವಿಲೇವಾರಿಗೆ ಕಠಿಣವಾದ ಕಾನೂನು ಮತ್ತು ವ್ಯವಸ್ಥೆಗಳು ಇವೆ. ಆದರೆ ನಮ್ಮಲ್ಲಿ ಅತ್ಯಂತ ಭ್ರಷ್ಟ ಆಗಿರುವ ಸರಕಾರಿ ವ್ಯವಸ್ಥೆಗಳಲ್ಲಿ ಈ ಮೆಡಿಕಲ್ ವೇಸ್ಟ್ ನಿರ್ವಹಣೆಯೇ ಬಹುದೊಡ್ಡ ಸವಾಲು ಆಗಿದೆ.

6) ನಾವು ಕಸವನ್ನು ಎಸೆಯಲು ಆರಿಸಿಕೊಂಡ ಸುರಕ್ಷಿತ ತಾಣ ಎಂದರೆ ನದಿ ಮತ್ತು ತೊರೆಗಳು. ಈ ಕಸಗಳು ನದಿ ಮೂಲಗಳನ್ನು ಕಲುಷಿತ ಮಾಡಿ ದಶಕಗಳೇ ಕಳೆದಿವೆ. ಈಗಿನ ಅಪ್ಡೇಟ್ ಎಂದರೆ ಈ ತ್ಯಾಜ್ಯಗಳು ಅಂತರ್ಜಲ ಮಟ್ಟವನ್ನು ತಲುಪಿವೆ ಎಂಬುದು. ಅಪಾಯದ ಘಂಟೆ ನಮಗೆ ಕೇಳುತ್ತಿದೆಯಾ?

10) ಎಲ್ಲೆಂದರಲ್ಲಿ ಉಗಿಯುವ, ಎಲ್ಲೆಂದರಲ್ಲಿ ಕಸ ಎಸೆಯುವ, ಎಲ್ಲೆಂದರಲ್ಲಿ ಮೂತ್ರ ಮಾಡುವ ನಮ್ಮ ಕೆಟ್ಟ ಅಭ್ಯಾಸಗಳು ಸ್ವಚ್ಛ ಭಾರತದ ಅಭಿಯಾನಕ್ಕೆ ಭಾರಿ ತೊಡಕುಗಳು ಎಂದು ನನಗೆ ಅನಿಸುತ್ತದೆ.

ಇಚ್ಚಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ

ಇದೆಲ್ಲವೂ ಸರಿ ಆಗುವುದು ಯಾವಾಗ? ಇದಕ್ಕೆ ನಮ್ಮಲ್ಲಿ ಇಚ್ಚಾಶಕ್ತಿ ಬರುವುದು ಯಾವಾಗ?

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top