ವಿರಾಸತ್: ರಾಸಲೀಲೆ ನೃತ್ಯದ ವೈಭವ, ಡೊಳ್ಳಿನ ಅಬ್ಬರದ ಅಲೆ

ಕರಾವಳಿಯಲ್ಲಿ ಅವತರಿಸಿದ ಯದುಕುಲ ಲೋಕ

ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ವಿರಾಸತ್‌ನ ನಾಲ್ಕನೇ ದಿನವಾದ ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶೈಕ್ಷಣಿಕ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಚಲನ ಸೃಷ್ಟಿಸಿದರು. ಬಡಗುತಿಟ್ಟಿನ ಯಕ್ಷ ವೇಷಧಾರಿಗಳು ಕೃಷ್ಣನ ರಾಸಲೀಲೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು.
ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ’ ಯಕ್ಷ ರೂಪಕ ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು.’ರಂಗನೇತಕೆ ಬಾರನೇ..’ ‘ಕೊಳಲನೂದುತ ಬಂದ ಕೃಷ್ಣ’ ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ ಸೃಷ್ಟಿಸಿತು. ಚೆಂಡು, ನೀರಾಟ, ಉಯ್ಯಾಲೆ, ಕೋಲಾಟವನ್ನುಬಯಕ್ಷ ರೂಪಕದಲ್ಲಿ ಬಿಂಬಿಸಿದರು. ಕೃಷ್ಣನ ಬಾಲ ಲೀಲೆ ಸಾರುವ ಕಾಳಿಂಗ ಮರ್ದನ, ಕಂಸ ವಧೆ, ರಾಧೆಯರು, ವಸುದೇವ, ಪೂತನಿ ಸಂಹಾರದ ದೃಶ್ಯಾವಳಿಗಳನ್ನು ಮೂಡಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ನಂತರ ವೇದಿಕೆಯಲ್ಲಿ ಮೊಳಗಿದ್ದು ಡೊಳ್ಳಿನ ಸದ್ದು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ನೆಲದ ದೇಸಿ ಕಲೆಯನ್ನು ಉಳಿಸುವ ಸಲುವಾಗಿ ರೂಪಿಸಿದ ಸಾಂಸ್ಕೃತಿಕ ತಂಡ ಡೊಳ್ಳಿನ ಅಬ್ಬರದ ಅಲೆಯನ್ನೇ ಸೃಷ್ಟಿಸಿತು. ಡೊಳ್ಳು ಹಾಗೂ ತಾಳದ ಜೊತೆ ಕಸರತ್ತು ಮೈ ನವಿರೇಳಿಸಿತು. ಡೊಳ್ಳಿನಲ್ಲೂ ಹುಡುಗ- ಹುಡುಗಿಯರು ಸವಾಲ್ ಜವಾಬ್ ನಡೆಸಿದರು. ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್‌ನ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೂ ಧ್ವನಿಯಾಯಿತು. ಹುಡುಗ-ಹುಡುಗಿಯರಸ್ಪರ್ಧೆ ಏರ್ಪಟ್ಟು ಕನ್ನಡ ಧ್ವಜ ಹಾರಾಡಿತು.































 
 

ನಂತರ ದಾಂಡಿಯಾ ಗರ್ಭಾದ ಹೊಳಪು. ಗುಜರಾತ್‌ನಲ್ಲಿ ನವರಾತ್ರಿ ಸಂದರ್ಭದಲ್ಲಿ ದಾಂಡಿಯಾ ನರ್ತನ ಮಾಡುತ್ತಾರೆ. ಈ ದಾಂಡಿಯಾದಲ್ಲಿ ಕೃಷ್ಣ-ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯರ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ಏರ್ಪಡಿಸುವ ಗರ್ಭಾ ಮತ್ತು ದಾಂಡಿಯಾದ ನೃತ್ಯ, ರಾಧಾ-ಶ್ಯಾಮ್‌ ನರ್ತನ ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು. ‘ರಾಧೆ ಶ್ಯಾಮ್’ ಹಾಡಿಗೆ ಹೆಜ್ಜೆ ಹಾಕಿದರು. ಕೋಲಾಟದ ಕೋಲು ದುರ್ಗಾ ದೇವಿಯ ದುಷ್ಟ ಸಂಹಾರದ ಕತ್ತಿಯ ಪ್ರತೀಕವಾಯಿತು.
ಕೆಂಪು, ಗುಲಾಬಿ, ಹಳದಿ, ಕಿತ್ತಳೆ ಸೇರಿದಂತೆ ಪ್ರಖರ ಬಣ್ಣಗಳ ಚಾನ್ಯ, ಚೋಲಿ ಅಥವಾ ಘಾಗ್ರಾ ಚೋಲಿ, ಬಾಂದನಿ, ಅಭ್ಲಾ (ಕನ್ನಡಿ) ಸಹಿತ ದಪ್ಪನೆಯ ಗುಜರಾತಿ ಅಂಚನ್ನು ಹೊಂದಿದ ದುಪ್ಪಟ್ಟಾ ತೊಟ್ಟ ಹುಡುಗಿಯರು, ಹೊಳೆವ ನೆಕ್ಲೆಸ್, ಬಳೆ, ಸೊಂಟಪಟ್ಟಿ, ಕಿವಿಯೋಲೆ ಸೇರಿದಂತೆ ಭಾರಿ ಆಭರಣಗಳನ್ನು ಧರಿಸಿ ಹೆಜ್ಜೆ ಹಾಕಿದಾಗ,ಸಾಂಪ್ರದಾಯಿಕ ಕೆಡಿಯಾ ಹಾಗೂ ಪೈಜಾಮ(ಧೋತಿ) ತೊಟ್ಟ ಶ್ವೇತ ವರ್ಣಧಾರಿ ಪುರುಷರು ಸಾಥ್ ನೀಡಿದ್ದು, ಅವರ ನರ್ತನಕ್ಕೆ ರಮಣೀಯ ಲೋಕ ಸೃಷ್ಟಿಯಾಯಿತು.

ಆಳ್ವಾಸ್ ತಂಡದ ಬಳಿಕ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯಪಟುಗಳು ವಿದ್ವಾನ್ ವೀಣಾ ಮೂರ್ತಿ ವಿಜಯ ಅವರ ನಿರ್ದೇಶನದಲ್ಲಿ ಸಂತ ನಾರಾಯಣ ತೀರ್ಥರ ‘ಶಿವ ತರಂಗಂ’ ಪ್ರಸ್ತುತ ಪಡಿಸಿದರು. ಭಕ್ತಿ, ಧರ್ಮ, ರಾಜಯೋಗದ ಮಿಶ್ರಣದ ಈ ನೃತ್ಯಲಾಸ್ಯ ಶಿವಾರಾಧನೆಯ ಭಾಗವಾಗಿದೆ. ಆಂಧ್ರಪ್ರದೇಶದ ಕೂಚುಪುಡಿಯಲ್ಲಿ ಹುಟ್ಟಿದ ಈ ನೃತ್ಯ ಪ್ರಕಾರ ಭಾರತೀಯ 8 ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪ್ರಮುಖವಾಗಿದೆ. ಮಡಿಕೆ ಮೇಲೆ ನಿಂತು ಹಾಗೂ ತಲೆಯ ಮೇಲೆ ತಂಬಿಗೆ ಇರಿಸಿ ತಟ್ಟೆ ಮೇಲೆ ನರ್ತಿಸಿದ ಸಮತೋಲನ ಆಕರ್ಷಕವಾಗಿ ಮೂಡಿಬಂತು.

ಬೆಂಗಳೂರಿನ ಕಾರ್ತಿಸ್‌ ಫರ್ಫಾಮಿಂಗ್ ಆರ್ಟ್ಸ್‌ ಬೆಂಗಳೂರಿನ ಕಾರ್ತಿಕ್‌ ಶೆಟ್ಟಿ ಸಂಯೋಜನೆಯಲ್ಲಿ ಭಕ್ತಿ, ಭಾವಗಳನ್ನು ಪ್ರದರ್ಶಿಸುವ, ಕೃಷ್ಣನ ಲೀಲೆಗಳನ್ನು ಅನಾವರಣಗೊಳಿಸುವ ‘ಕೃಷ್ಣರಾಸ್’ ಅಪೂರ್ವ ನೃತ್ಯ ವೈಭವ ಸಾದರಪಡಿಸಿದರು. ನವಿಲು ಗರಿ, ನೀರ ಅಲೆ, ಒಡಿಸ್ಸಿ ವೇಷಭೂಷಣದಲ್ಲಿ ಗಮನ ಸೆಳೆದರು.
ಅನಂತರ ಶಾಂತಿ, ಏಕತೆಯ ಮಂತ್ರದ ಜಪ. ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚರ್‌ಜೀ ಮಾರ್ಗದರ್ಶನದಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ನೃತ್ಯ ಸಂಗಮದ ‘ತ್ರಿವರ್ಣ’ ಮೂಡಿಬಂತು.

ಭರತನಾಟ್ಯ, ಕಥಕ್ ಹಾಗೂ ಒಡಿಸ್ಸಿ ಮೂರೂ ಭಾರತೀಯ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರವೇ ಆಗಿದ್ದರೂ, ಮೂಲ, ಶೈಲಿ, ತಂತ್ರ, ಹಿನ್ನೆಲೆ, ವೇಷಭೂಷಣ, ವಾದ್ಯಮೇಳ, ಕೇಶವಿನ್ಯಾಸ ಇತ್ಯಾದಿಯಲ್ಲಿ ವಿಭಿನ್ನತೆಯನ್ನು ಹೊಂದಿವೆ. ಪರ್ವತ ಶ್ರೇಣಿಯ ಒಡಿಶಾ ಮೂಲದ ಒಡಿಸ್ಸಿ, ಉತ್ತರ ಪ್ರದೇಶದ ಕಥಕ್ ಹಾಗೂ ತಮಿಳುನಾಡಿನ ಮೂಲದ ಭರತನಾಟ್ಯಂ ಮೂಡುಬಿದಿರೆಯ ಆಳ್ವಾಸ್ ವಿರಾಸತ್‌ನಲ್ಲಿ ಸಂಗಮಿಸಿ ನೃತ್ಯಲೋಕವನ್ನೇ ಸೃಷ್ಟಿಸಿತು.

ಕಥಕ್ ಮುಖಭಾವ, ವೇಗ, ಶೈಲಿಯಲ್ಲಿದ್ದರೆ, ಒಡಿಶಾ ತನ್ನ ಆಂಗಿಕ ಹಾಗೂ ಹಸ್ತ ಚಲನೆಯಲ್ಲಿ ಗಮನ ಸೆಳೆಯಿತು. ‘ಆನಂದ ಮಂಗಳದಾಯಕ’ ಎಂಬ ಪ್ರೀತಿಯ ಆಧ್ಯಾತ್ಮಿಕ ಸಂದೇಶ ಹಾಗೂ ರವೀಂದ್ರನಾಥ ಠಾಗೋರ್ ಅವರ ಸಂದೇಶ ನೀಡಿದರು. ಬೇಧಭಾವ, ಹಿಂಸೆ, ಮೌಢ್ಯ ತೊಡೆದು ಹಾಕಿ, ಕ್ರೋಧ ದ್ವೇಷ ಹೊರ ಹಾಕಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲವೂ ಒಂದೇ ನಮ್ಮದು ಏಕತೆಯ ಮಂತ್ರ, ಅನಂತ ಪ್ರೇಮ, ಶಾಂತಿಯ ಮಂತ್ರ ಸಾರಿ ಎಂಬ ಸಂದೇಶವನ್ನು ತ್ರಿವರ್ಣ ಮೂಲಕ ನೀಡಿದರು. ನಿತೇಶ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top