ಇಬ್ಬರು ಕುಖ್ಯಾತ ಸರಗಳ್ಳರ ಬಂಧನ : ಸರ, ಬೈಕ್‌ ವಶ

39ಕ್ಕೂ ಅಧಿಕ ಪ್ರಕರಣಗಳಿರುವ ಕುಖ್ಯಾತ ಕಳ್ಳರು 24 ತಾಸೊಳಗೆ ಅರೆಸ್ಟ್‌

ಮಂಗಳೂರು : ಕಾರ್ಕಳದಲ್ಲಿ ಕಳೆದ ಡಿ.9ರಂದು ನಡೆದ ಸರಗಳ್ಳತನ ಕೃತ್ಯದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡ ಪರಾರಿಯಾದ ಪ್ರಕರಣಗಳ ಆರೋಪಿಗಳು ಇವರು ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಕಳವುಗೈದ ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಸುರತ್ಕಲ್ ಕೃಷ್ಣಾಪುರ ನಿವಾಸಿ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ(43) ಮತ್ತು ಬಂಟ್ವಾಳ ತಾಲೂಕಿನ ಅದ್ದೆಡ್ಡಿ ಹೌಸ್ ಬಿ.ಮೂಡ ಪರ್ಲಿಯಾ ಕ್ರಾಸ್ ರೋಡ್ ನಿವಾಸಿ ಉಮ್ಮರ್ ಶಿಯಾಫ್(29) ಬಂಧಿತ ಆರೋಪಿಗಳು. ಕಾರ್ಕಳದ ಸರಕಳ್ಳತನ ಕೃತ್ಯದಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದು, ಈಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.































 
 

ಡಿಸೆಂಬರ್ 9ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಸುಂಕಮಾರು-ಮಂಜರಪಲ್ಕೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಸಂತಿ ಎಂಬವರಲ್ಲಿ ಬೈಕ್‌ನಲ್ಲಿ ಬಂದ ಯುವಕ ಮತ್ತು ಯುವತಿ ಭಾಸ್ಕರ್ ಎಂಬವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳುವ ನೆಪದಲ್ಲಿ ಬೈಕ್ ಸವಾರನು ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮೊದಲು ಡಿಸೆಂಬರ್ 6ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಸುಜಿನಾ ಡಿಸೊಜಾರವರು ಮಧ್ಯಾಹ್ನ ಅಂಗನವಾಡಿಯಲ್ಲಿ ಕೆಲಸದಲ್ಲಿರುವ ಸಂದರ್ಭ ಇಬ್ಬರು ಬೈಕಿನಲ್ಲಿ ಅಂಗನವಾಡಿಗೆ ಬಂದು ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದು, ಸುಜಿನಾ ಡಿಸೊಜಾರವರು ಮಂಜನಾಡಿಗೆ ಹೋಗುವ ದಾರಿಯನ್ನು ಹೇಳಿ, ಅಂಗನವಾಡಿಯ ಬಾಗಿಲನ್ನು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಅಂಗನವಾಡಿಯ ಒಳಗೆ ಪ್ರವೇಶಿಸಿ ಸುಜಿನಾ ಡಿಸೊಜಾರವರ ಕುತ್ತಿಗೆಯ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಸಿಸಿಬಿ ಪೊಲೀಸರು ಸಿಸಿ ಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 4 ದಿನಗಳ ಹಿಂದೆ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಹಬೀಬ್ ಹಸನ್ ಹಾಗೂ ಆತನ ಸಹಚರನು ಭಾಗಿಯಾಗಿರುವ ಕುರಿತು ಖಚಿತಗೊಂಡ ಮೇರೆಗೆ ಅವರ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿಯಲ್ಲಿದ್ದಾನೆ ಮಾಹಿತಿ ಬಂದಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಹಬೀಬ್ ಹಸನ್ ಎಂಬಾತನಿಂದ ಕಾರ್ಕಳದಿಂದ ಸುಲಿಗೆ ಮಾಡಿದ 17.43 ಗ್ರಾಂ ಚಿನ್ನದ ಸರ, ಸರಕಳ್ಳತನ ಮಾಡಲು ಉಪಯೋಗಿಸಿದ ಹೀರೊ ಹೊಂಡಾ ಬೈಕ್, ಒಂದು ಚೂರಿಯನ್ನು ವಶಪಡಿಸಿಕೊಳ್ಳಲಾದೆ. ಈತನನ್ನು ದಸ್ತಗಿರಿ ಮಾಡಲು ಪೊಲೀಸರು ಬಂದಾಗ ಅವರಿಗೆ ಹಲ್ಲೆ ನಡೆಸಲು ಈ ಚೂರಿಯನ್ನು ಇಟ್ಟುಕೊಂಡಿದ್ದನು ಎಂದು ತಿಳಿದುಬಂದಿದೆ.
ಆರೋಪಿಗಳಿಬ್ಬರು ಎರಡು ತಿಂಗಳ ಹಿಂದೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿ ಸೆರೆಯಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಕಳೆದ ಡಿಸೆಂಬರ್ 6ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಬಿಡುಗಡೆಗೊಂಡ ದಿನವೇ ಮಂಗಳೂರು ನಗರದ ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ ಮರುದಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡಿದ್ದರು. ಎರಡು ದಿನ ಬಿಟ್ಟು ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಇನ್ನೊಂದು ಬೈಕನ್ನು ಕಳವು ಮಾಡಿ ಅದೇ ಬೈಕ್‌ನಲ್ಲಿ ಆರೋಪಿ ಹಬೀಬ್ ಆತನ ಸ್ನೇಹಿತೆ ಮಹಿಳೆಯ ಜೊತೆಗೂಡಿ ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡಿದ್ದ.

ಆರೋಪಿ ಹಬೀಬ್ ಹಸನ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿ ಉಮ್ಮರ್ ಶಿಯಾಫ್ ಎಂಬಾತನು ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಕಾರ್ಕಳದ ಮಂಜರಪಲ್ಕೆಯಲ್ಲಿ ಆರೋಪಿಗಳು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ 24 ಗಂಟೆ ಒಳಗಡೆ ಆರೋಪಿಯನ್ನು ಹಾಗೂ ಸುಲಿಗೆ ಮಾಡಿದ ಸೊತ್ತನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top