ಬೆಳ್ತಂಗಡಿಯಲ್ಲಿ ವ್ಯಾಪಿಸಿದ ಭಾರಿ ಕಾಡ್ಗಿಚ್ಚು

ಬೆಟ್ಟದ ತುದಿ ತನಕ ವ್ಯಾಪಿಸಿದ ಬೆಂಕಿ; ನಂದಿಸುವ ಕಾರ್ಯಾಚರಣೆ ಪ್ರಗತಿಯಲ್ಲಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಸುಮಾರು 10 ಎಕರೆ ಪ್ರದೇಶದಲ್ಲಿ ಬುಧವಾರ ಭಾರಿ ಕಾಡ್ಗಿಚ್ಚು ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದ್ದು, ಶೇ. 80ಕ್ಕೂ ಹೆಚ್ಚಿನ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ.

ಕಾಡ್ಗಿಚ್ಚಿಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಳದಂಗಡಿ ವಲಯದ ಹೂವಿನಕೊಪ್ಪಲು ಹಾಗೂ ಊರ್ಜಾಲುಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿತ್ತು ಎಂದು ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಅರಣ್ಯಾಧಿಕಾರಿ ಸ್ವಾತಿ ಎಲ್.​ ತಿಳಿಸಿದ್ದಾರೆ.

ಊರ್ಜಾಲುಬೆಟ್ಟದ ತಳಭಾಗದಲ್ಲಿ ಬೆಂಕಿಯನ್ನು ಬಹುತೇಕ ನಂದಿಸಲಾಗಿದೆ. ಬೆಟ್ಟದ ತುದಿ ಪ್ರವೇಶವು ಕುದುರೆಮುಖ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಆ ಕಡೆಯಿಂದಲೂ ಕಾರ್ಯಾಚರಣೆ ನಡೆಯುತ್ತಿದೆ. ನಮಗೆ ಸಾಧ್ಯವಾದಷ್ಟೂ ಮಟ್ಟಿಗೆ ಕುದುರೆಮುಖ ವಿಭಾಗದ ವ್ಯಾಪ್ತಿಗೆ ಒಳಪಟ್ಟ ಪ್ರದೇಶದ ಬೆಂಕಿ ನಂದಿಸಲು ಪ್ರಯತ್ನಿಸಿದ್ದೇವೆ. ಅದು ನೆಟ್​​ವರ್ಕ್ ಇಲ್ಲದ ಪ್ರದೇಶವಾಗಿದ್ದು, ಅರಣ್ಯ ಇಲಾಖೆಯ ಕುದುರೆಮುಖ ವಿಭಾಗದ ಸಿಬ್ಬಂದಿ ಜತೆ ಸಂವಹನ ನಡೆಸುವುದು ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬೆಂಕಿ ನಂದಿಸಬೇಕಿರುವ ಪ್ರದೇಶ ದುರ್ಗಮ ಬೆಟ್ಟ ಪ್ರದೇಶವಾದ್ದರಿಂದ ಕಾರ್ಯಾಚರಣೆ ಕಷ್ಟಕರವಾಗಿದೆ. ಸಿಬ್ಬಂದಿ ಸುಮಾರು 7 ಕಿಲೋಮೀಟರ್​​ನಷ್ಟು ನಡೆದುಕೊಂಡೇ ತೆರಳಬೇಕಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುತ್ಯಡ್ಕ ಹಾಗೂ ಮಿತ್ತಬಾಗಿಲು ಸಮೀಪದ ಕುರೇಕಲ್​ನಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಅಳದಂಗಡಿ ವಿಭಾಗದಲ್ಲಿ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಗುತ್ಯಡ್ಕ ಪ್ರದೇಶದಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಭಾಗದಲ್ಲಿ ಸ್ವಯಂಸೇವಕರ ಸಹಾಯದಿಂದ ಬೆಂಕಿ ನಂದಿಸಲಾಗಿದೆ ಎಂದು ಸ್ವಾತಿ ಎಲ್. ತಿಳಿಸಿದ್ದಾರೆ.







































 
 

ಸಕಲೇಶಪುರ ಬಳಿ ಇತ್ತೀಚೆಗೆ ಕಾಡ್ಗಿಚ್ಚು ಕಾಣಿಸಿಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಮೃತಪಟ್ಟಿದ್ದರು. ಬೆಂಕಿ ನಂದಿಸಲು ಡಿಆರ್​ಎಫ್​ಒ ಮಂಜುನಾಥ್ ನೇತೃತ್ವದಲ್ಲಿ 6 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿತ್ತು. ಘಟನೆಯಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು. ವೇಗವಾಗಿ ವ್ಯಾಪಿಸಿದ್ದ ಬೆಂಕಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಸುತ್ತುವರಿದಿತ್ತು. ಬೆಂಕಿಗೆ ಸಿಲುಕಿ ಡಿಆರ್​ಎಫ್‌ಓ ಮಂಜುನಾಥ್, ಫಾರೆಸ್ಟ್ ಗಾರ್ಡ್ ಸುಂದರೇಶ್ ವಾಚರ್‌ಗಳಾದ ತುಂಗೇಶ್ ಮತ್ತು ಮಹೇಶ್​ಗೆ ಗಾಯಗಳಾಗಿದ್ದವು. ಸುಂದರೇಶ್ ಹಾಗೂ ಮಂಜುನಾಥ್ ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿದ್ದರು. ರಸ್ತೆ ಸಂಪರ್ಕ ಇಲ್ಲದ ಸ್ಥಳದಿಂದ ಅಡ್ಡೆಯಲ್ಲಿ ಹೊತ್ತು ತಂದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top