ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾದ ಸೋನಿಯಾ – ಸೊರೊಸ್‌ ಕಂಪನಿ ನಂಟಿನ ಆರೋಪ

ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಪಟ್ಟು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ನಂಟಿನ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಸೋನಿಯಾ ಗಾಂಧಿ ಮತ್ತು ಅಮೆರಿಕದ ವಿವಾದಾತ್ಮಕ ಉದ್ಯಮಿ ಜಾರ್ಜ್ ಸೊರೊಸ್ ಒಡೆತನದ ಸಂಸ್ಥೆಗಳ ಜೊತೆಗಿರುವ ನಂಟನ್ನು ಬಹಿರಂಗಗೊಳಿಸಿ ತಿರುಗೇಟು ನೀಡಿದ್ದು, ಈ ವಿಚಾರ ಈಗ ರಾಷ್ಟ್ರ ರಾಜಕಾರಣದಲ್ಲಿ ಬಹಳ ಚರ್ಚೆಗೀಡಾಗುತ್ತಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಂಟು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಭಾರತ ವಿರೋಧಿಗಳ ವಿರುದ್ಧ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಮನವಿ ಮಾಡಿದರು. ಜಾರ್ಜ್‌ ಸೊರೊಸ್‌ ವಿಚಾರವನ್ನು ಈಗಾಗಲೇ ನಾವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸೊರೊಸ್ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿ ಎಂದು ಹೇಳಿದ್ದಾರೆ.

ಪ್ರಸ್ತುತ ದೇಶದ ಮುಂದಿರುವ ಸಮಸ್ಯೆ ಬಹಳ ಗಂಭೀರವಾಗಿದೆ. ಕೆಲವು ಸಮಸ್ಯೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜಾರ್ಜ್ ಸೊರೊಸ್ ಲಿಂಕ್‌ಗಳು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆಗೆ ನೇರವಾಗಿ ಬೆಸೆದುಕೊಂಡಿವೆ. ಆದರೆ ನಾವು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿ ನೋಡುವುದಿಲ್ಲ. ಯಾವುದೇ ಭಾರತೀಯರು ಭಾರತದ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದರೆ ಅವುಗಳನ್ನು ವಿರೋಧಿಸಬೇಕು ಎಂದರು.
ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಆರೋಪಿಸಿದ್ದಕ್ಕೆ ಸೋಮವಾರದ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯರು ಭಾರಿ ಪ್ರತಿಭಟನೆ ನಡೆಸಿದರು. ಎರಡು ಕಡೆಯಿಂದ ಘೋಷಣೆ ಕೂಗಿದ ಬೆನ್ನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.































 
 

ಸೋನಿಯಾ ಗಾಂಧಿ ಮತ್ತು ಸೊರೊಸ್‌ ಸಂಸ್ಥೆಯ ಜೊತೆ ನಂಟು ಇದೆ ಎನ್ನುವುದಕ್ಕೆ ಬಿಜೆಪಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಜಾರ್ಜ್‌ ಸೊರೋಸ್‌ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ. ಸೊರೋಸ್‌ರಿಂದ ನೆರವು ಪಡೆಯುತ್ತಿರುವ ‘ಫೋರಂ ಆಫ್‌ ಡಿ ಡೆಮಾಕ್ರಟಿಕ್‌ ಲೀಡರ್ಸ್‌ ಇನ್‌ ಏಷ್ಯಾ ಪೆಸಿಫಿಕ್‌’ ಎಂಬ ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ ಎನ್ನುವುದು ಬಿಜೆಪಿ ಮಾಡಿರುವ ಆರೋಪ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಪೋಸ್ಟ್‌ ಅನ್ನು ಬಿಜೆಪಿ ಹಾಕಿದೆ. ಅದಾನಿ ಕುರಿತು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸೊರೊಸ್ ಅವರ ಒಸಿಸಿಆರ್‌ಪಿ ಎಂಬ ಸಂಸ್ಥೆ ನೇರ ಪ್ರಸಾರ ಮಾಡಿದೆ. ಇದು ಅವರ ಅಪಾಯಕಾರಿ ಸಂಬಂಧವನ್ನು ತಿಳಿಸುತ್ತದೆ. ಭಾರತೀಯ ಆರ್ಥಿಕತೆಯನ್ನು ಹಳಿತಪ್ಪಿಸುವ ಅವರ ಪ್ರಯತ್ನಗಳನ್ನು ಇದು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ನಿನ್ನೆ ಸರಣಿ ಆರೋಪಗಳನ್ನು ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top