ಹುಸಿ ಬೆದರಿಕೆ ಕಳುಹಿಸಿ ಕಾಟ ಕೊಡುತ್ತಿರುವವರಿಗೆ ಶೋಧ
ಹೊಸದಿಲ್ಲಿ: ದಿಲ್ಲಿಯ 40ಕ್ಕೂ ಅಧಿಕ ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಇ-ಮೇಲ್ ಮೂಲಕ ಬಾಂಬಿಟ್ಟಿರುವ ಕುರಿತು ಬಂದಿದ್ದ ಬೆದರಿಕೆ ಸಂದೇಶ ತಾಸುಗಳಷ್ಟು ಹೊತ್ತು ಆತಂಕಕ್ಕೆ ಕಾರಣವಾಯಿತು. ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಶಾಲೆಯಿಂದ ಶಾಲೆಗೆ ಅಲೆದಾಡಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಿದ ಬಳಿಕ ಪರಿಸ್ಥಿತಿ ನಿರಾಳವಾಯಿತು.
40ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್ ನೀಡಬೇಕು, ಇಲ್ಲದಿದ್ದರೆ ಶಾಲಾ ಕಟ್ಟಡಗಳ ಒಳಗೆ ಇಡಲಾದ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಭೀತಿ ಹುಟ್ಟಿಸಲಾಗಿದೆ.
ನಾನು ಶಾಲೆಗಳ ಕಟ್ಟಡಗಳ ಒಳಗೆ ಅನೇಕ ಬಾಂಬ್ಗಳನ್ನು ಇಟ್ಟಿದ್ದೇನೆ. ಬಾಂಬ್ಗಳು ಚಿಕ್ಕದಾಗಿದ್ದು ಅಡಗಿಸಿ ಇಡಲಾಗಿದೆ. ಇದರಿಂದ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ, ಆದರೆ ಬಾಂಬ್ಗಳನ್ನು ಸ್ಫೋಟಿಸುವಾಗ ಅನೇಕ ಜನರು ಗಾಯಗೊಳ್ಳಬಹುದು. ನನಗೆ 30 ಸಾವಿರ ಡಾಲರ್ ಹಣ ಬರದಿದ್ದರೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.
ಈ ಇ-ಮೇಲ್ ನಿನ್ನೆ ರಾತ್ರಿ 11.38ರ ಸುಮಾರಿಗೆ ಬಂದಿದೆ. ಹೆಚ್ಚಿನ ಶಾಲೆಗಳಲ್ಲಿ ಇಂದು ಇ-ಮೇಲ್ ಬಾಕ್ಸ್ ತೆರೆದಾಗ ಬೆದರಿಕೆ ಸಂದೇಶ ಕಂಡುಬಂದಿದೆ. ಬಾಂಬ್ ನಿಷ್ಕ್ರಿಯ ತಂಡಗಳು ಮತ್ತು ಇತರ ತುರ್ತು ಸೇವೆಗಳ ಸಹಯೋಗದೊಂದಿಗೆ ತಕ್ಷಣದ ತನಿಖೆಗಳು ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ತಕ್ಷಣವೇ ಸ್ಥಳಾಂತರಿಸಲಾಯಿತು.
ಶೋಧದ ಬಳಿಕ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ, ತನಿಖೆ ಮುಂದುವರಿದಿದೆ. ಅಧಿಕಾರಿಗಳು ನಗರದಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ.