ಗ್ಯಾಸ್ ಸೋರಿಕೆಯಾಗಿ ಸ್ಫೋಟಿಸಿದ ಸಿಲಿಂಡರ್, ಹಾರಿಹೋದ ಛಾವಣಿ
ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಮನೆಯೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ಬಿರುಸಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಲಗಿದ್ದ ಮಂಚ ಸುಟ್ಟು ಕರಕಲಾಗಿದೆ.
ತಾಯಿ ಖುಬ್ರಾ (40) ಹಾಗೂ ಮೂವರು ಮಕ್ಕಳಾದ ಮೆಹದಿ (15), ಮಝಿಯಾ (13), ಮಾಯಿದಾ (11) ಘಟನೆಯಲ್ಲಿ ತೀವ್ರ ಗಾಯಗೊಂಡವರು. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಸ್ಫೋಟದ ದೊಡ್ಡ ಸದ್ದು ಕೇಳಿಸಿದೆ. ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಕಿಟಕಿ, ಮಲಗಿದ ಕೊಠಡಿಗೆ ಸಂಪೂರ್ಣ ಹಾನಿಯಾಗಿದೆ. ಮುತ್ತಲಿಬ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಮಾತ್ರ ಇದ್ದರು.
ತಡರಾತ್ರಿ ಕುಬ್ರಾ ಶೌಚಾಲಯಕ್ಕೆ ಹೋಗಲು ಸ್ವಿಚ್ ಹಾಕಿದಾಗ ಸಿಲಿಂಡರ್ನಿಂದ ಸೋರಿಕೆಯಾದ ಗ್ಯಾಸ್ಗೆ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.