ಅಡಿಲೇಡ್‌ ಟೆಸ್ಟ್‌ : ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 19 ರನ್‌ ಗುರಿ, ಮೂರೇ ದಿನಕ್ಕೆ ಆಟ ಫಿನಿಷ್‌

ಅಡಿಲೇಡ್​​: ಇಲ್ಲಿನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​​ನಲ್ಲಿ ಭಾರತ ತಂಡವು ಕೇವಲ 175 ರನ್​​ಗಳಿಗೆ ಆಲೌಟ್ ಆಗಿದೆ. ಈ ಆಲೌಟ್​​ನೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​​ನಲ್ಲಿ ಕೇವಲ 19 ರನ್​ಗಳ ಸುಲಭ ಗುರಿ ಪಡೆದುಕೊಂಡು, 10 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮಿಶೆಲ್ ಸ್ಟಾರ್ಕ್​​ ಅವರ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲಿ ಕೇವಲ 180 ರನ್​​ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಸ್ಟಾರ್ಕ್​ ಕೇವಲ 48 ರನ್​ ನೀಡಿ​ 6 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ (64) ಅರ್ಧಶತಕ ಬಾರಿಸಿದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಕೇವಲ 141 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 17 ಫೋರ್​​ಗಳೊಂದಿಗೆ 140 ರನ್ ಚಚ್ಚಿದರು. ಈ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 337 ರನ್ ಪೇರಿಸಿ ಆಲೌಟ್ ಆಯಿತು.































 
 

157 ರನ್​​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ಕೆಎಲ್ ರಾಹುಲ್ (7) ಹಾಗೂ ಯಶಸ್ವಿ ಜೈಸ್ವಾಲ್ (24) ಬೇಗನೆ ಔಟಾದರೆ, ಆ ಬಳಿಕ ಬಂದ ಶುಭ್​​ಮನ್​ ಗಿಲ್ 28 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 11 ರನ್​​ಗಳಿಸಲಷ್ಟೇ ಶಕ್ತರಾದರೆ, ನಾಯಕ ರೋಹಿತ್ ಶರ್ಮಾ 6 ರನ್​ಗೆ ಆಟ ಮುಗಿಸಿದರು. ಪರಿಣಾಮ ದ್ವಿತೀಯ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 128 ರನ್​ ಕಲೆಹಾಕಿತು.

ಮೂರನೇ ದಿನದಾಟದ ಆರಂಭದಲ್ಲೇ ರಿಷಭ್ ಪಂತ್ (28) ವಿಕೆಟ್ ಕಬಳಿಸಿದ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡಕ್ಕೆ ಅಮೂಲ್ಯ ಯಶಸ್ಸು ತಂದು ಕೊಟ್ಟರು. ಇದರ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (7) ಕೂಡ ಔಟಾದರು. ಇನ್ನು ಹರ್ಷಿತ್ ರಾಣಾ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಏಕಾಂಗಿ ಹೋರಾಟ ನಡೆಸಿದ ನಿತೀಶ್ ಕುಮಾರ್ ರೆಡ್ಡಿ 47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 42 ರನ್ ಬಾರಿಸಿ 9ನೇ ವಿಕೆಟ್​ ಆಗಿ ಹೊರ ನಡೆದರು. ಅಂತಿಮವಾಗಿ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ 175 ರನ್​​ಗಳಿಗೆ ಆಲೌಟ್ ಆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top