ಅಧಿವೇಶನದ ಹೊತ್ತಿನಲ್ಲಿ ಸರಕಾರಕ್ಕೆ ಮುಜುಗರವಾಗುವ ಮಾಹಿತಿ ಬಹಿರಂಗ
ಬೆಳಗಾವಿ : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಸಮರ್ಪಕ ಚಿಕಿತ್ಸೆ ಸಿಗದೆ ಮೃತಪಟ್ಟಿರುವುದು ದೇಶವ್ಯಾಪಿಯಾಗಿ ಸುದ್ದಿಯಾಗಿ ಸರಕಾರ ತೀವ್ರ ಮುಜುಗರ ಅನುಭವಿಸುತ್ತಿರುವಾಗಲೇ ಬೆಳಗಾವಿಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳ ಮೃತಪಟ್ಟಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಬೆಳಗಾವಿಯಲ್ಲಿ ನಾಳೆಯಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ಬಾಣಂತಿಯುರ ಸಾವುಗಳ ಪ್ರಕರಣವನ್ನು ಪ್ರಸ್ತಾಪಿಸಿ ಸರಕಾರದ ಮೇಲೆ ದಾಳಿ ಮಾಡಲು ಸಿದ್ಧವಾಗಿರುವಾಗಲೇ ಸ್ವತಹ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿಯ ಆಘಾತಕಾರಿ ಸಾವುಗಳ ಮಾಹಿತಿ ನೀಡಿದ್ದಾರೆ.
2024ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಜಿಲ್ಲೆಯಲ್ಲಿ 29 ಬಾಣಂತಿಯರ ಸಾವು ಸಂಭವಿಸಿದೆ. ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಪ್ರಭಾರಿ ಡಿಎಚ್ಒ ಶರಣಪ್ಪ ಗಡೆದ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ 322 ಶಿಶುಗಳ ಸಾವಾಗಿದ್ದು, ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮೃತಪಟ್ಟಿವೆ. ಪ್ರತಿ ತಿಂಗಳು 45ರಿಂದ 52 ಸರಾಸರಿಯಲ್ಲಿ ಶಿಶುಗಳು ಮರಣ ಹೊಂದಿವೆ. ತೂಕ ಕಡಿಮೆ, ಸರಿಯಾಗಿ ಬೆಳವಣಿಗೆ ಆಗದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಅಪೌಷ್ಟಿಕತೆಯಿಂದ ಶಿಶುಗಳು ಮೃತಪಟ್ಟಿವೆ ಎಂದು ಬಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ವಿಠ್ಠಲ್ ಶಿಂಧೆ ಮತ್ತು ಡಿಎಚ್ಒ ಶರಣಪ್ಪ ಗಡೆದ ತಿಳಿಸಿದ್ದಾರೆ.