ಕುಂದಾಪುರ ಕೋಡಿ ಬೀಚ್‌ನಲ್ಲಿ ಸಂಭವಿಸಿದ ದುರಂತ
ಉಡುಪಿ: ಕುಂದಾಪುರದ ಕೋಡಿ ಬೀಚಿನಲ್ಲಿ ಈಜಾಡಲು ಸಮುದ್ರಕ್ಕಿಳಿದ ಮೂವರು ಸಹೋದರರ ಪೈಕಿ ಇಬ್ಬರು ಮುಳುಗಿ ಸಾವಿಗೀಡಾದ ದಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಓರ್ವನನ್ನು ರಕ್ಷಿಸಲಾಗಿದೆ.
ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬವರ ಪುತ್ರರಾದ ಧನರಾಜ್ (23) ಮತ್ತು ದರ್ಶನ್ (18) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಯುವಕರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಶನಿವಾರ ರಜೆ ಇದ್ದ ಕಾರಣ ಮೂವರು ಸಹೋದರರು ಸಂಜೆ 6 ಗಂಟೆ ಸುಮಾರಿಗೆ ಕೊಡಿ ಬೀಚಿನಲ್ಲಿ ಈಜಾಡಲು ಹೋಗಿದ್ದರು ಎನ್ನಲಾಗಿದೆ. ಸಹೋದರರು ಮುಖಕ್ಕೆ ಮಾಸ್ಕ್ ಮತ್ತು ಕಣ್ಣಿಗೆ ಕಣ್ಗವಚ ಧರಿಸಿದ್ದರು. ಈಜಾಡಲು ಸಿದ್ದರಾಗಿಯೇ ಬಂದಿದ್ದರು ಹಾಗೂ ಮೂವರಿಗೂ ಚೆನ್ನಾಗಿ ಈಜು ಗೊತ್ತಿದೆ ಎನ್ನಲಾಗಿದೆ. ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ಘಟನೆ ಸಂದರ್ಭ ಬೆಂಗಳೂರಿನ ಪ್ರವಾಸಿಗರುವರು ಗಮನಿಸಿ ತಕ್ಷಣ ಸಮುದ್ರಕ್ಕೆ ಹಾರಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.