ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಕಡಬದ ಹೊಸಮಠದಲ್ಲಿರುವ ನೂತನ ಸಮುದಾಯ ಭವನದಲ್ಲಿ ಡಿ.25 ರಂದು ನಡೆಯುವ ಸಂಘದ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಪೂರ್ವಭಾವಿ ಸಭೆ ಶನಿವಾರ ಕಡಬದಲ್ಲಿ ನಡೆಯಿತು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಅಂದು ಬೆಳಿಗ್ಗೆ 7 ಗಂಟೆಗೆ ನಾಗ ತಂಬಿಲ ಹಾಗೂ ನೂತನ ಆಡಳಿತ ಕಚೇರಿಯಲ್ಲಿ ಗಣಹೋಮ ನಡೆಯಲಿದ್ದು, 8.30 ಕ್ಕೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೆಟ್, ಮಹಿಳೆಯರಿಗೆ ಕಬಡ್ಡಿ, ತ್ರೋಬಾಲ್, ಹಗ್ಗಜಗ್ಗಾಟ, ಲಗೋರಿ, 60 ವರ್ಷ ಮೇಲ್ಪಟ್ಟ ಪುರುಷರಿಗೆ ಗುರಿಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅದೃಷ್ಟದ ಆಟ ನಡೆಯಲಿದ ಎಂದು ತಿಳಿಸಲಾಯಿತು.
ಅಲ್ಲದೆ ಎಸ್ಎಸ್ಎಲ್‍ಸಿ ಮತ್ತು ಪಿಯುಸಿಯಲ್ಲಿ 2023-24ನೇ ಸಾಲಿನಲ್ಲಿ ಗರಿಷ್ಠ ಅಂಕ ಪಡೆದ ತಲಾ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯನ್ನು ಡಿ.15 ರ ಒಳಗೆ ಸಂಘದ ಕಚೇರಿಗೆ ತಲುಪಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.