ಭಾರತದ ಮೇಲೆ ಮತ್ತೆ ದಾಳಿ : ಉಗ್ರ ಮಸೂದ್ ಅಜರ್ ಉಗ್ರ ಪ್ರತಿಜ್ಞೆ

ಪಾಕಿಸ್ಥಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತ

ಹೊಸದಿಲ್ಲಿ: ಭಾರತದ ಮೇಲೆ ಮತ್ತೆ ದಾಳಿ ಮಾಡುತ್ತೇನೆ ಎಂದು ಪಾಕಿಸ್ಥಾನದ ಉಗ್ರಗಾಮಿ ಸಂಘಟನೆ ಜೈಶ್‌ ಎ ಮೊಹಮ್ಮದ್‌ನ ಮುಖಂಡ ಮಸೂದ್‌ ಅಜರ್‌ ಉಗ್ರ ಪ್ರತಿಜ್ಞೆ ಮಾಡಿದ್ದಾನೆ. ನಿಷೇಧಿತ ಭಯೋತ್ಪಾದನಾ ಸಂಘಟನೆಯಾಗಿರುವ ಜೈಶ್-ಎ-ಮೊಹಮ್ಮದ್ 2011ರ ಸಂಸತ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದು, ಈ ದಾಳಿಗಳ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಆಗಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ಥಾನವನ್ನು ಭಾರತ ಒತ್ತಾಯಿಸಿದೆ.

ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಕ್ ಸೆಮಿನರಿಯಲ್ಲಿ ಮಾಡಿದ ಭಾಷಣದಲ್ಲಿ ಅಜರ್, ಭಾರತದ ಮೇಲೆ ದಾಳಿಯನ್ನು ಮುಂದುವರಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾನೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾನೆ. ಆತನ ಭಾಷಣದ ವರದಿ ಆಧರಿಸಿ ಭಾರತ ಕ್ರಮಕ್ಕೆ ಆಗ್ರಹಿಸಿದೆ. ಕಳೆದ ನವಂಬರ್‌ನಲ್ಲಿ ಮಾಡಿದ ಭಾಷಣ ಈಗ ವೈರಲ್‌ ಆಗಿದೆ. ಅಜರ್ ತನ್ನ ಅತಿರೇಕದ ಭಾಷಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಇಲಿ ಎಂದು ಕರೆದಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾನೆ.































 
 

ಅಜರ್‌ನ ಭಾಷಣದ ವರದಿಗಳನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ನಿಜವಾಗಿದ್ದರೆ, ಗಡಿಯಾಚೆಗೆ ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರನ್ನು ಒಳಗೊಂಡಿರುವ ಪಾಕಿಸ್ಥಾನದ ದ್ವಂದ್ವ ನಿಲುವನ್ನು ಬಹಿರಂಗಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಸೂದ್ ಅಜರ್ ಭಾರತದಲ್ಲಿನ ಗಡಿಯಾಚೆಗಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಆದ್ದರಿಂದ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಆದರೆ ಅವನು ಪಾಕಿಸ್ಥಾನದಲ್ಲಿ ಇಲ್ಲ ಎಂದು ಆ ದೇಶ ಹೇಳಿದೆ. ವರದಿಗಳನ್ನು ನಂಬುವುದಾದರೆ, ಅದು ಪಾಕಿಸ್ಥಾನದ ದ್ವಂದ್ವವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top