ಸರ್ವೋಚ್ಚ ನ್ಯಾಯಾಲಯದಲ್ಲೂ ಉದ್ಧವ ಠಾಕ್ರೆಗೆ ಮುಖಭಂಗ
ಹೊಸದಿಲ್ಲಿ : ಶಿವಸೇನೆಯ ಏಕನಾಥ ಶಿಂಧೆ ಬಣವೇ ಮೂಲ ಶಿವಸೇನೆ ಎಂದು ಮಾನ್ಯ ಮಾಡಿ ಬಿಲ್ಲು ಬಾಣ ಚಿಹ್ನೆಯನ್ನು ಈ ಬಣಕ್ಕೆ ನೀಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಬಣ ಇಲ್ಲೂ ತೀವ್ರ ಮುಖಭಂಗ ಅನುಭವಿಸಿದೆ.
ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾ. ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ 3 ನ್ಯಾಯಾಧೀಶರ ಪೀಠ, ಚುನಾವಣಾ ಆಯೋಗಕ್ಕೆ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದಾಗ್ಯೂ, ನ್ಯಾಯಪೀಠ ಉದ್ಧವ್ ಠಾಕ್ರೆ ಗುಂಪಿಗೆ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ ಎಂಬ ಹೆಸರು ಮತ್ತು ಪಂಜಿನ ಚಿಹ್ನೆಯನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಏಕನಾಥ್ ಶಿಂಧೆ ಬಣ ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ಬಳಸದಂತೆ ತಡೆಯಬೇಕು ಎಂದು ಉದ್ಧವ್ ಠಾಕ್ರೆ ಬಣ ಆಗ್ರಹಿಸಿತ್ತು. ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಉದ್ಧವ್ ಠಾಕ್ರೆ ಪರ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಪಕ್ಷದ ಚಿಹ್ನೆ ಮತ್ತು ಹೆಸರನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಸಿಗುವ ಭರವಸೆ ಇಲ್ಲ. ಗಮನಾರ್ಹವೆಂದರೆ, ಏಕನಾಥ್ ಶಿಂಧೆ ಬಣ ಇದೀಗ ಪಕ್ಷದ ಕಚೇರಿಯ ಮೇಲೂ ಹಕ್ಕು ಚಲಾಯಿಸಿದೆ. ಈಗ ನಮ್ಮನ್ನು ಶಿಂಧೆ ಬಣ ಎಂದು ಕರೆಯಬಾರದು. ನಾವು ಈಗ ನಿಜವಾದ ಶಿವಸೇನೆ ಎಂದು ಅವರು ಹೇಳುತ್ತಿದ್ದಾರೆ.