’ಪಿಎಂಎವೈ-ಯು’ ಯೋಜನೆ ಅನುಷ್ಟಾನಕ್ಕೆ ಇನ್ನೂ ಒಪ್ಪಂದ ಮಾಡಿಕೊಳ್ಳದ ಸಿದ್ದರಾಮಯ್ಯ ಸರ್ಕಾರ

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯಿಂದ ಕಾಂಗ್ರೆಸ್ ಬಣ್ಣ ಬಯಲು

ಮಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಆಶ್ರಯರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ-ನಗರ(ಪಿಎಂಎವೈ-ಯು) 2.0 ಸ್ಕೀಮ್‌ ಅನುಷ್ಠಾನಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇಲ್ಲಿವರೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಆ ಮೂಲಕ ನಗರ ಪ್ರದೇಶದ ಬಡವರಿಗೆ ಸ್ವಂತ ಸೂರು ಅಥವಾ ಮನೆ ಸೌಲಭ್ಯ ಒದಗಿಸುವ ಈ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರಾಸಕ್ತಿ ವಹಿಸಿರುವ ಅಂಶ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ವಸತಿ ಸಚಿವ ತೋಖಾನ್ ಸಾಹು ನೀಡಿರುವ ಉತ್ತರದಲ್ಲಿ ಈ ಗಂಭೀರ ವಿಚಾರ ಬಯಲಾಗಿದೆ.































 
 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವ್ಯಾಪಿಯಾಗಿ ನಗರ ಪ್ರದೇಶದಲ್ಲಿ ನೆಲೆಸಿರುವ ವಸತಿರಹಿತರು, ಕಡುಬಡವರು, ಮಧ್ಯಮ ವರ್ಗದ ಬಡ ಕುಟುಂಬಗಳಿಗೆ ಯೋಗ್ಯ ವಸತಿ ಒದಗಿಸುವ ಉದ್ದೇಶದಿಂದ ಕಳೆದ ಸೆಪ್ಟಂಬರ್‌ 1ರಿಂದ ಪಿಎಂಎವೈ-ಯು 2.0 ಯೋಜನೆ ಅನುಷ್ಠಾನಕ್ಕೆ ತಂದಿದೆ. ಈ ಪಿಎಂಎವೈ-ಯು 2.0 ಯೋಜನೆ ಜಾರಿ ಮಾರ್ಗಸೂಚಿ, ನಿಯಮಾವಳಿ ಪ್ರಕಾರ ಇಲ್ಲಿವರೆಗೆ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ 29 ರಾಜ್ಯಗಳು ಕೇಂದ್ರದ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಮಾತ್ರ ಇಲ್ಲಿವರೆಗೂ ನಗರ ಪ್ರದೇಶದ ಬಡವರಿಗೆ ವಸತಿ ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕೇಂದ್ರ ವಸತಿ ಸಚಿವ ತೋಖಾನ್ ಸಾಹು ತಿಳಿಸಿದ್ದಾರೆ.

ಪಿಎಂಎವೈ-ಯು 2.0 ಯೋಜನೆಯಡಿ ನಗರ ಪ್ರದೇಶದಲ್ಲಿನ ಅರ್ಹ ಫಲಾನುಭವಿಗಳು ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ, ಖರೀದಿ ಅಥವಾ ಬಾಡಿಗೆ ಪಡೆದುಕೊಳ್ಳುವ ವ್ಯವಸ್ಥೆಯಿದೆ. ಫಲಾನುಭವಿಗಳಿಂದ ಮನೆ ನಿರ್ಮಾಣ(ಬಿಎಲ್‌ಸಿ), ಕೈಗೆಟಕುವ ಮನೆಗಳ ಪಾಲುದಾರಿಕೆ ವ್ಯವಸ್ಥೆ(ಎಎಚ್‌ಪಿ), ಕೈಗೆಟಕುವ ದರದ ಬಾಡಿಗೆ ಮನೆ ವ್ಯವಸ್ಥೆ(ಎಆರ್‌ಎಚ್‌), ಬಡ್ಡಿ ಸಬ್ಸಿಡಿ ಸ್ಕೀಮ್‌(ಐಎಸ್‌ಎಸ್‌) ವ್ಯವಸ್ಥೆ ಎಂಬ ನಾಲ್ಕು ವಿಭಾಗದಡಿ ಈ ಪಿಎಂಎವೈ-ಯು 2.0 ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದೆಂದು ವಸತಿ ಸಚಿವರು ವಿವರಿಸಿದ್ದಾರೆ.

ಪಿಎಂಎವೈ-ಯು 2.0 ಯೋಜನೆ ಅಂದರೆ ಏನು?

ಪ್ರಧಾನಮಂತ್ರಿ ಆವಾಸ್ ಯೋಜನೆ- ನಗರ 2.0 ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ನಗರ ಪ್ರದೇಶದಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ನಗರದ ಬಡ ಮತ್ತು ಮಧ್ಯಮ ವರ್ಗದ ಬಡ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಲು, ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತದೆ.

ಪಿಎಂಎವೈ-ಯು 2.0 ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಮನೆ ಇಲ್ಲದ ಆರ್ಥಿಕವಾಗಿ ದುರ್ಬಲ ವಿಭಾಗ (EWS)(ವಾರ್ಷಿಕ ಆದಾಯ 3 ಲಕ್ಷ ರೂ.), ಕಡಿಮೆ ಆದಾಯದ ಗುಂಪು (LIG) ( 3 ಲಕ್ಷದಿಂದ 6 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ) ಅಥವಾ ಮಧ್ಯಮ ಆದಾಯ ಗುಂಪು (MIG)(ವಾರ್ಷಿಕ ಆದಾಯ 6 ಲಕ್ಷದಿಂದ 9 ಲಕ್ಷ ರೂ.) ವಿಭಾಗಗಳಿಗೆ ಸೇರಿದ ಕುಟುಂಬಗಳು ಮನೆ ಖರೀದಿಸಲು ಅಥವಾ ನಿರ್ಮಿಸಲು ಅರ್ಹರಾಗಿರುತ್ತಾರೆ.

ವಿಧವೆಯರು, ಒಂಟಿ ಮಹಿಳೆಯರು, ದಿವ್ಯಾಂಗರು, ಹಿರಿಯ ನಾಗರಿಕರು, ಟ್ರಾನ್ಸ್‌ಜೆಂಡರ್‌ಗಳು, SC/ST, ಅಲ್ಪಸಂಖ್ಯಾತರು ಮತ್ತು ಸಮಾಜದಲ್ಲಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಗುರುತಿಸಲಾದ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿವಿಧ ಕುಶಲಕರ್ಮಿಗಳು, ಸ್ವಚ್ಛತಾ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು , ಕೊಳಗೇರಿ ನಿವಾಸಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top