ಪುತ್ತೂರು: ಗುರುವಾರ ಸಂಜೆ ಕಂಪ್ಯೂಟರ್ ಆಫ್ ಮಾಡುವ ಸಂದರ್ಭ ಸಿಡಿಲು ಬಡಿದು ಆಸ್ಪತ್ರೆಗೆ ದಾಖಲಾಗಿದ್ದ ಬನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಚಿತ್ರಾವತಿ ಅವರ ಆರೋಗ್ಯ ವಿಚಾರಿಸಲು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಹಾವೀರ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಕೆಲಸವನ್ನು ತನ್ನ ಕೆಲಸ ಎಂದು ತಿಳಿದು ಸಂಜೆ ಹೊತ್ತು ಕೆಲಸ ಮಾಡುವ ಸಂದರ್ಭ ಪಿಡಿಒ ಚಿತ್ರಾವತಿ ಅವರು ಸಿಡಿಲಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರು ಸಹಿತ ಇನ್ನಿತರರು ಧಾವಿಸಿ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾರೆ. ಪಿಡಿಒ ಚಿತ್ರಾವತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಶೀಘ್ರ ಗುಣಮುಖರಾಗಿ ಆದಷ್ಟು ಬೇಗ ಕೆಲಸಕ್ಕೆ ಹಾಜರಾಗುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆಆ ವೆಚ್ಚವನ್ನು ಸರಕಾರದಿಂದ ಭರಿಸುವ ವ್ಯವಸ್ಥೆಯಿದೆ.
ಅದನ್ನು ಪ್ರಾಮಾಣಿಕವಾಗಿ ಒದಗಿಸಿ ಕೊಡಲಾಗುವುದು. ಹಾಗೆಯೇ ನಗರಸಭೆ, ಗ್ರಾಪಂ, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಏನಾದರು ತೊಂದರೆ ಉಂಟಾದಲ್ಲಿ ನನಗೆ ಫೋನ್ ಮೂಲಕ ತಿಳಿಸಿದರೆ ನನ್ನಿಂದಾಗುವ ಸಹಾಯ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.