4921 ನಿವೇಶನಗಳನ್ನು ಅಕ್ರಮವಾಗಿ ಹಂಚಿರುವ ಮಾಹಿತಿ ಇ.ಡಿ.ಗೆ ಲಭ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದುಕೊಂಡ ಪ್ರಕರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಈಗ ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನೆಲ್ಲ ಬಯಲಿಗೆಳೆದಿದೆ. ಮುಡಾದಲ್ಲಿ ಆಗಿರುವುದು ಬರೀ 14 ಸೈಟ್‌ಗಳ ಅಕ್ರಮವಲ್ಲ, ಬರೋಬ್ಬರಿ 2800 ಕೋ. ರೂ. ಬೃಹತ್ ಅಕ್ರಮ ಎಂಬ ಅಂಶ ಇ.ಡಿ. ತನಿಖೆಯಿಂದ ಬಯಲಿಗೆ ಬಂದಿದೆ.
ಕೆಲ ದಿನಗಳ ಹಿಂದೆ 1,095 ಸೈಟ್‌ಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಬರೋಬ್ಬರಿ 4,921 ಸೈಟ್‌ಗಳನ್ನು ಅಕ್ರಮವಾಗಿ ಹಂಚಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಇತರ ನಗರಗಳಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ಸೈಟ್ ಹಂಚಿಕೆಯ ಬಗ್ಗೆಯೂ ಗುಮಾನಿ ವ್ಯಕ್ತವಾಗಿತ್ತು, ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ಸೈಟ್ ಹಂಚಿಕೆಗಳ ಬಗ್ಗೆ ತನಿಖೆ ನಡೆಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಮುಡಾದಲ್ಲಿ 50:50 ಅನುಪಾತ ಅಷ್ಟೇ ಅಲ್ಲ, 60:40 ಅನುಪಾತದಲ್ಲಿ ಲೇಔಟ್‌ಗೆ ಲೇಔಟ್‌ಗಳನ್ನೇ ಅಕ್ರಮ ಮಾಡಿದ್ದಾರೆ. ಅದಕ್ಕೆ ಪೂರಕ ದಾಖಲೆ ತಿದ್ದಿದ್ದಾರೆ ಎನ್ನುವುದು ಇ.ಡಿ ತನಿಖೆಯಲ್ಲಿ ಬಯಲಾಗಿದೆ. ಇದು ಬರೋಬ್ಬರಿ 2,800 ಕೋಟಿ ರೂ.ಗಳ ಬೃಹತ್ ಅಕ್ರಮ. 13 ವರ್ಷದಲ್ಲಿ 4,921ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ ಆಗಿದೆ ಎನ್ನಲಾಗಿದೆ. ಈ ಮೊದಲು 700 ಕೋ.ರೂ. ಅಕ್ರಮ ಆಗಿದೆ ಎನ್ನಲಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್ 4500 ಕೋ. ರೂ. ಅಕ್ರಮ ಆಗಿದೆ ಎಂದು ಆರೋಪಿಸಿದ್ದಾರೆ.
ಲೇಔಟ್‌ಗೆ ಲೇಔಟ್‌ಗಳನ್ನೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮುಡಾದ ಇಬ್ಬರು ಮಾಜಿ ಆಯುಕ್ತರಿಂದ ಅಕ್ರಮದ ಸರಮಾಲೆ ನಡೆದಿದೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಅಕ್ರಮ ಲೇಔಟ್‌ಗಳ ನಿರ್ಮಾಣ ನಡೆದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್‌ಗಳನ್ನು ಕೂಡ ಮುಡಾ ಕಬ್ಜಾ ಮಾಡಿತ್ತು. ಕನ್ವರ್ಷನ್ ಲೇಔಟ್‌ಗಳಲ್ಲೂ ಅಕ್ರಮ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮುಡಾ ಹಗರಣದ ತನಿಖೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.