ಬೆಳಗಾವಿ: ಮಗಳ ಪ್ರೀತಿ ವಿರೋಧ ಮಾಡಿದ್ದ ತಾಯಿ ಹಾಗೂ ಸಹೋದರನನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಕ್ಕೊಳದಲ್ಲಿ ಇಂದು ನಡೆದಿದೆ.
ಮಂಗಳ ನಾಯಕ (45), ಪ್ರಜ್ವಲ್ ನಾಯಕ (18) ಮೃತ ದುರ್ದೈವಿಗಳು.
ಕಳೆದ ಕೆಲ ತಿಂಗಳಿಂದ ಮಂಗಳ ಅವರ ಮಗಳು ಹಾಗೂ ರವಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ತಾಯಿ ಮಗಳನ್ನು ಕರೆದು ಬುದ್ಧಿ ಮಾತು ಹೇಳಿದ್ದಾರೆ. ತಾಯಿ ಬುದ್ದಿ ಮಾತು ಹೇಳಿದರು ಕೇಳದ ಮಗಳು ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾಳೆ. ಇದಕ್ಕೆ ಮತ್ತೆ ಮನೆಯಲ್ಲಿ ಜಗಳವಾಗಿದೆ. ಇದರಿಂದ ಸಿಟ್ಟಾದ ಆರೋಪಿ ರವಿ ಏಕಾಏಕಿ ಮನೆಗೆ ನುಗ್ಗಿ ಕಬ್ಬಿಣದ ರಾಡ್ ನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಪರಿಣಾಮ ತಲೆ ಬುರುಡೆ ಓಪನ್ ಆಗಿದ್ದು ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಘಟನೆಗೆ ಸಂಬಂಧಪಟ್ಟಂತೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿ ಹಾಗೂ ಮಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.