ಮಂಗಳೂರು: ಸುಳ್ಯ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದ ತನಿಖೆ ಈಗಲೂ ನಡೆಯುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದು ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ನೌಷಾದ್ ಎಂಬಾತನ ಮನೆಗೆ ದಾಳಿ ಮಾಡಿದೆ.
ನೌಷಾದ್ ಬೆಳ್ತಂಗಡಿ ತಾಲೂಕಿನ ಪಡಂಗಡಿ ಎಂಬಲ್ಲಿಯವ. ಬೆಂಗಳೂರಿನಿಂದ ಬಂದ ಎನ್‌ಐಎ ತಂಡ ಬೆಳಗ್ಗೆ ಪಡಂಗಡಿಯ ಮನೆಗೆ ದಾಳಿ ಮಾಡಿ ಶೋಧ ನಡೆಸಿ ಮನೆಯವರನ್ನು ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಐವರು ಎನ್‌ಐಎ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ 5.30ರ ವೇಳೆಗೆ ಪಡಂಗಡಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೌಷಾದ್ ಸುಳಿವು ನೀಡಿದವರಿಗೆ ಎನ್‌ಐಎ 2 ಲ.ರೂ. ಬಹುಮಾನ ಘೋಷಿಸಿದೆ. ಇಂದು ಬೆಳಗ್ಗೆ ನೌಷಾದ್ ಮನೆಗೆ ಬಂದ ಎನ್‌ಐಎ ತಂಡಕ್ಕೆ ಬೆಳ್ತಂಗಡಿ ಪೊಲೀಸರು ಸಹಕರಿಸಿದ್ದಾರೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಶಾಪ್ ಹೊಂದಿದ್ದರು. 2022ರ ಜುಲೈ 26ರಂದು ರಾತ್ರಿ 8.30ರ ವೇಳೆ ಅಂಗಡಿಯನ್ನು ಮುಚ್ಚಿ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗಲೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಘಟನೆ ಕುರಿತು ಪ್ರವೀಣ್ ಸ್ನೇಹಿತ ಮಧು ಕುಮಾರ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆಗಸ್ಟ್ 3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆಗಸ್ಟ್ 4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಮುಂದುವರಿಸಿ ಹಲವು ಆರೋಪಿಗಳನ್ನು ಬಂಧಿಸಿದ್ದರು.