ಲಕ್ಷಕ್ಕೂ ಮೀರಿ ಜನ ಭಾಗವಹಿಸುವ ನಿರೀಕ್ಷೆ; ಸಚಿವರ ದಂಡೇ ಹಾಸನದತ್ತ
ಬೆಂಗಳೂರು: ಉಪಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕಾಂಗ್ರೆಸ್ ಈಗ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಜೆಡಿಎಸ್-ಬಿಜೆಪಿ ಎರಡಕ್ಕೂ ಟಕ್ಕರ್ ಕೊಡಲು ‘ಕೈ’ ತಂತ್ರ ಹೂಡಿದೆ.
ಅರಸೀಕೆರೆ ರಸ್ತೆಯ ಎಸ್.ಎಂ ಕೃಷ್ಣ ನಗರದಲ್ಲಿರುವ ಕೆ.ಎಸ್ ಸಿಎ ಕ್ರಿಕೆಟ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಲಕ್ಷ ಲಕ್ಷ ಜನರ ಆಗಮನದ ನಿರೀಕ್ಷೆ ಇದೆ. ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸಚಿವ ಸಂಪುಟ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 480 ಅಡಿ ಅಗಲ ಮತ್ತು 600 ಅಡಿ ಉದ್ದದ ಬೃಹತ್ ಟೆಂಟ್ ಹಾಕಲಾಗಿದೆ. ಸುಮಾರು 70 ಸಾವಿರ ಜನರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪೊಲೀಸ್ ಇಲಾಖೆ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಸಮಾವೇಶದ ಭದ್ರತೆಗಾಗಿ 5 ಎಸ್ಪಿ, 6 ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 40 ಇನ್ಸ್ಪೆಕ್ಟರ್ ಮತ್ತು 80 ಪಿ.ಎ.ಸ್.ಐಗಳನ್ನು ಒಳಗೊಂಡ ಸುಮಾರು 2,000 ಪೊಲೀಸರನ್ನು ನೆರೆ ಜಿಲ್ಲೆಗಳಾದ ಮಂಡ್ಯ, ಮೈಸೂರು ಕೊಡಗಿನಿಂದ ಕರೆಸಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆ ತರಲು ಹಾಸನ ವಿಭಾಗ ಒಂದರಿಂದಲೇ 500ಕ್ಕೂ ಹೆಚ್ಚು ಬಸ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಹೀಗಾಗಿ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೆಂಗಳೂರಿನಿಂದ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ ಸೇರಿದಂತೆ 400 ಬಸ್ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯನವರು ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ತನ್ನ ಬಲ ಪ್ರದರ್ಶನ ಮಾಡಲು ಆಯೋಜಿಸಿದ್ದ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ. ಕೆ.ಶಿವಕುಮಾರ್ ತಂತ್ರಗಾರಿಕೆಯಿಂದ ಪಕ್ಷದ ಕಾರ್ಯಕ್ರಮವಾಗಿ ಬದಲಾಯಿಸಿ ಅದಕ್ಕೆ ಜನಕಲ್ಯಾಣ ಸಮಾವೇಶ ಎಂದು ಹೆಸರುಕೊಟ್ಟಿದ್ದಾರೆ. ಸಮಾವೇಶದ ಆರಂಭದ ತಯಾರಿಯನ್ನೆಲ್ಲ ಸಿದ್ದರಾಮಯ್ಯ ನಿಷ್ಠ ಸಚಿವರೇ ಮಾಡಿದ್ದರು. ಈ ನಡುವೆ ಹೈಕಮಾಂಡ್‌ಗೆ ಹೋದ ನಿಗೂಢ ಪತ್ರವೊಂದು ಇಡೀ ಕಾರ್ಯಕ್ರಮದ ಸ್ವರೂಪವನ್ನೇ ಬದಲಾಯಿಸಿದೆ. ಈ ಮೂಲಕ ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿದರೂ ಹೈಕಮಾಂಡ್ ಮಾತಿಗೊಪ್ಪಿ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.