ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿದ್ದೀರಿ?

ಅದಕ್ಕೊಂದು ಸ್ವಯಂಮಾಪಕ ಇಲ್ಲಿದೆ

ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿರುತ್ತೀರಿ ಅಷ್ಟು ಯಶಸ್ಸು ನಿಮ್ಮದಾಗುತ್ತದೆ. ನೀವು ಪಾಸಿಟಿವ್ ಆಗಿದ್ದರೆ ನಿಮ್ಮ ಬದುಕು ಇನ್ನೊಬ್ಬರಿಗೆ ಮಾದರಿ ಆಗುತ್ತದೆ. ನೀವು ಎಲ್ಲರಿಗೂ ಸ್ಫೂರ್ತಿ ತುಂಬುವ ಐಕಾನ್ ಆಗುತ್ತೀರಿ. ನಿಮ್ಮ ಬದುಕು ಇತರರಿಗೆ ಯಶೋಗಾಥೆ ಆಗುತ್ತದೆ. ನಿಮ್ಮ ಸಿಗ್ನೇಚರ್ ಸಾವಿರಾರು ಮಂದಿಗೆ ಆಟೋಗ್ರಾಫ್ ಆಗುತ್ತದೆ. ನಿಮ್ಮ ಆತ್ಮವಿಶ್ವಾಸದ ಮಟ್ಟವು ಯಾವಾಗಲೂ ಒಂದೇ ರೀತಿ ಇರುತ್ತದೆ. ಸೋಲು ನಿಮ್ಮನ್ನು ಕಂಡು ಹೆದರುತ್ತದೆ. ನಿಮ್ಮ ಬದುಕಿನ ಪುಸ್ತಕ ಸಾವಿರಾರು ಮಂದಿಗೆ ಪ್ರೇರಣೆ ಕೊಡುವ ಆಟೊಬಯೋಗ್ರಾಫಿ ಆಗುತ್ತದೆ.

ನೀವೆಷ್ಟು ಪಾಸಿಟಿವ್ ಅನ್ನೋದು ನಿಮಗೆ ಗೊತ್ತೇ?































 
 

ಇಲ್ಲಿ 30 ಹೇಳಿಕೆಗಳಿವೆ. ಅವುಗಳನ್ನು ಸರಿಯಾಗಿ ಓದಿಕೊಂಡು ಅವುಗಳ ಮುಂದೆ ಹೌದು ಅಥವಾ ಅಲ್ಲ ಮಾತ್ರ ಹಾಕುತ್ತಾ ಹೋಗಿ.

1) ನಾನು ಬದುಕುವುದು ನನಗಾಗಿ. ಯಾರನ್ನೋ ಮೆಚ್ಚಿಸಲು ಅಲ್ಲ.

2) ನಾನೊಬ್ಬ ಅನನ್ಯ ವ್ಯಕ್ತಿ. ಬೇರೆ ಯಾರನ್ನೋ ಕಾಪಿ ಮಾಡಲು ಹೋಗುವುದಿಲ್ಲ.

3) ನನ್ನ ಬೆನ್ನ ಹಿಂದೆ ಯಾರೋ ಆಡಿದ ಕಟುವಾಕ್ಯಗಳಿಗೆ ಉತ್ತರ ಕೊಡುತ್ತಾ ಹೋಗುವುದು ನನ್ನ ಕೆಲಸ ಅಲ್ಲ.

4) ನಾನು ಜೀವನದ ಪ್ರತೀಯೊಂದು ಕ್ಷಣವನ್ನೂ ಆನಂದಿಸುತ್ತೇನೆ.

5) ನನ್ನ ಕನಸುಗಳು ನನ್ನವು. ಅವುಗಳನ್ನು ಎಂದಿಗೂ ನಾನು ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ.

6) ಬೇರೆಯವರು ನನಗೆ ಮಾಡಿದ ಸಣ್ಣ ಸಣ್ಣ ಉಪಕಾರಗಳನ್ನು ಸಹ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ.

7) ನನ್ನ ಯಾವುದೇ ತಪ್ಪುಗಳಿಗೆ ಕ್ಷಮೆ ಕೇಳಲು ಹಿಂದೆಮುಂದೆ ಯೋಚಿಸುವುದಿಲ್ಲ.

8) ನನಗೆ ದೊರೆತ ಯಾವುದೇ ಅವಕಾಶಗಳನ್ನು ತುಂಬಾ ಚೆನ್ನಾಗಿ ಉಪಯೋಗ ಮಾಡಿಕೊಳ್ಳುತ್ತೇನೆ. ಹಾಗೆಂದು ಬೇರೆಯವರ ಅವಕಾಶಗಳನ್ನು ಕಿತ್ತುಕೊಳ್ಳುವುದಿಲ್ಲ.

9) ನನ್ನನ್ನು ತೀವ್ರವಾಗಿ ಕಾಡುವ ನೋವುಗಳಿಂದ ಆದಷ್ಟು ಬೇಗ ಹೊರಗೆ ಬರುತ್ತೇನೆ.

10) ಯಾವುದೇ ಪೂರ್ವಗ್ರಹ ಇಲ್ಲದೆ ಯೋಚಿಸುತ್ತೇನೆ.

11) ತಾರತಮ್ಯ ಇಲ್ಲದೆ ಎಲ್ಲರನ್ನೂ ಸಮನಾಗಿ ಪ್ರೀತಿಸುತ್ತೇನೆ.

12) ನನ್ನ ತಪ್ಪುಗಳಿಂದ ಪಾಠ ಕಲಿಯುವುದು ನನಗೆ ಕಷ್ಟ ಆಗುವುದಿಲ್ಲ.

13) ನಾನು ಉತ್ತಮ ಸಂಬಂಧಗಳನ್ನು ಯಾವಾಗಲೂ ಗೌರವಿಸುತ್ತೇನೆ.

14) ನಾನು ಯಾರಿಗಾದರೂ ಪ್ರಾಮಿಸ್ ಕೊಡುವ ಮೊದಲು ತುಂಬಾ ಯೋಚನೆ ಮಾಡುತ್ತೇನೆ. ಪ್ರಾಮಿಸ್ ಕೊಟ್ಟ ನಂತರ ಹೆಜ್ಜೆ ಹಿಂದಿಡುವುದಿಲ್ಲ.

15) ನಾನು ನೇರವಾಗಿ ಮಾತಾಡುತ್ತೇನೆ. ಆದರೆ ಯಾರಿಗೂ ಹರ್ಟ್ ಆಗದ ಹಾಗೆ ಎಚ್ಚರ ತೆಗೆದುಕೊಳ್ಳುತ್ತೇನೆ.

16) ನನ್ನ ಆತ್ಮಗೌರವವನ್ನು (ಸೆಲ್ಫ್ ಎಸ್ಟೀಮ್) ಎಂದಿಗೂ ಕಳೆದುಕೊಳ್ಳುವುದಿಲ್ಲ.

17) ನಾನು ಯಾರನ್ನೂ ಬೆನ್ನಿನ ಹಿಂದೆ ಟೀಕೆ ಮಾಡುವುದಿಲ್ಲ.

18) ನನ್ನ ಭಾವನಾ ವಲಯದಲ್ಲಿ ಯಾರನ್ನೂ ಸೇರಿಸುವ ಮೊದಲು ತುಂಬಾ ಯೋಚನೆ ಮಾಡುತ್ತೇನೆ.

19) ನಮ್ಮ ಕುಟುಂಬಕ್ಕೆ, ನಮ್ಮನ್ನು ಪ್ರೀತಿಸುವವರಿಗಾಗಿ ನಾನು ಸಮಯವನ್ನು ತೆಗೆದಿಡುತ್ತೇನೆ.

20) ಕಣ್ಣ ಮುಂದೆ ಅನ್ಯಾಯ ನಡೆದಾಗ ನನ್ನ ಪರಿಮಿತಿಯಲ್ಲಿ ಪ್ರತಿಭಟನೆ ಮಾಡುತ್ತೇನೆ.

21) ಬೇರೆಯವರ ಟ್ಯಾಲೆಂಟ್ ಗುರುತಿಸಿ ಗೌರವಿಸುತ್ತೇನೆ.

22) ಯಾರಿಗೂ ಬೋಧನೆ ಮಾಡಲು ಹೋಗುವುದಿಲ್ಲ. ನಾನು ನಂಬಿದ ಮೌಲ್ಯಗಳನ್ನು ಎಂದಿಗೂ ಬಿಡುವುದಿಲ್ಲ.

23) ನನ್ನ ಅಸ್ಮಿತೆಯನ್ನು ಗೌರವಿಸದ ಯಾರನ್ನೂ (ಅವರು ಎಷ್ಟೇ ದೊಡ್ಡ ವ್ಯಕ್ತಿಗಳು ಆಗಿದ್ದರೂ) ನನ್ನ ಹತ್ತಿರ ಸೇರಿಸಿಕೊಳ್ಳುವುದಿಲ್ಲ.

24) ನನ್ನಲ್ಲಿ ಯಾವುದೇ ಧನಾತ್ಮಕವಾದ ಬದಲಾವಣೆ ತರಲು ನಾನು ತಡ ಮಾಡುವುದಿಲ್ಲ.

25) ತಂಡದಲ್ಲಿ ಕೆಲಸ ಮಾಡುವುದನ್ನು ಇಷ್ಟ ಪಡುತ್ತೇನೆ. ಯಶಸ್ಸು ದೊರೆತಾಗ ಎಲ್ಲರಿಗೂ ಹಂಚುತ್ತೇನೆ.

26) ನನ್ನ ನಡೆ, ನುಡಿ ಮತ್ತು ನಡವಳಿಕೆಗಳು ಎಂದಿಗೂ ಪಾರದರ್ಶಕ ಆಗಿರುತ್ತವೆ.

27) ಎಲ್ಲವೂ ನಡೆಯುವುದು ನನ್ನಿಂದಲೇ ಎಂಬ ಭ್ರಮೆ ನನಗಿಲ್ಲ.

28) ಅಡ್ಡಮಾರ್ಗಗಳಿಂದ ಯಶಸ್ಸು ಪಡೆಯಲು ನಾನು ಎಂದಿಗೂ ಪ್ರಯತ್ನ ಮಾಡುವುದಿಲ್ಲ.

29) ನನ್ನ ಕಾಲದಲ್ಲಿ ಹೀಗಿತ್ತು, ಹಾಗಿತ್ತು ಎಂದು ನಾನು ಎಂದಿಗೂ ಹೇಳುತ್ತಾ ನಿಲ್ಲುವುದಿಲ್ಲ.

30) ಸತ್ಯಕ್ಕೆ ಮತ್ತು ನ್ಯಾಯಕ್ಕೆ ಪರವಾದ ನನ್ನ ನಿಲುವುಗಳು ಎಂದಿಗೂ ಬದಲಾಗುವುದಿಲ್ಲ.

ಭರತವಾಕ್ಯ

ಈಗ ನಿಮ್ಮ ಹೌದು ಮತ್ತು ಅಲ್ಲಗಳನ್ನು ಎಣಿಸಲು ಆರಂಭ ಮಾಡಿ. ನಿಮ್ಮ ‘ಹೌದು’ ಎಂಬ ಉತ್ತರಗಳು 20ಕ್ಕಿಂತ ಹೆಚ್ಚು ಇವೆ ಎಂದಾದರೆ ನೀವು ‘ಪಾಸಿಟಿವ್ ಥಿಂಕರ್’ ಹೌದು ಎನ್ನಲು ಬೇರೆ ಯಾವ ಸಾಕ್ಷಿಯೂ ಬೇಡ. ಈಗ ನಿಮ್ಮನ್ನು ಯಾವ ಶತ್ರುಗಳೂ ಸೋಲಿಸಲು ಸಾಧ್ಯವೇ ಇಲ್ಲ.
ಅಭಿನಂದನೆ ನಿಮಗೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top