ಮಂಗಳೂರು: ಬಾಂಗ್ಲಾದೇಶದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲು ಹಿಂದು ಸಂಘಟನೆಗಳು ಮಂಗಳೂರಿನಲ್ಲಿ ಡಿ.4ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ.
ಬೆಳಗ್ಗೆ ಮಂಗಳೂರಿನ ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧ ತನಕ ಬೃಹತ್ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು. ಹಲವು ಪ್ರಮುಖ ಹಿಂದು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಅಲ್ಲ, ಸಮಸ್ತ ಹಿಂದುಗಳ ರಕ್ಷಣೆಗಾಗಿ ಪಕ್ಷಭೇದವಿಲ್ಲದೆ ನಡೆಯಲಿದೆ. ಹಿಂದುಗಳ ಹಿತ ಬಯಸುವ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು ಸಂಘಟಕರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಬಳಿಕ ಅಧಿಕಾರ ಸೂತ್ರ ಕೈಗೆತ್ತಿಕೊಂಡಿರುವ ಮುಸ್ಲಿಮ್ ಮೂಲಭೂತವಾದಿಗಳು ಹಿಂದುಗಳನ್ನು ಗುರಿಮಾಡಿಕೊಂಡು ಹಿಂಸಾಚಾರ ನಡೆಸುತ್ತಿದ್ದಾರೆ. ದೇವಸ್ಥಾನ, ಮಠ ಮಂದಿರಗಳನ್ನು ಧ್ವಂಸ ಮಾಡಲಾಗುತ್ತಿದೆ. ಹಿಂದು ಹೆಣ್ಣು ಮಕ್ಕಳ ಮಾನಹರಣವಾಗುತ್ತಿದೆ. ಆದರೂ ಅಂತಾರಾಷ್ಟ್ರೀಯ ಸಮುದಾಯ ಈ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಬಾಂಗ್ಲಾದ ಹಿಂದುಗಳಿಗೆ ಬೆಂಬಲ ಸೂಚಿಸಿ, ಅವರ ರಕ್ಷಣೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹಿಂದು ಸಂಘಟನೆಗಳು ಹೇಳಿಕೊಂಡಿವೆ.
ಹಿಂದು ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ವಿಶ್ವಹಿಂದು ಪರಿಷತ್, ಬಜರಂಗ ದಳ ಮತ್ತಿತರ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ತಯಾರಿ ನಡೆದಿದೆ. ಉಡುಪಿ, ಕಾರ್ಕಳ, ಕಾಪು, ಕುಂದಾಪುರ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಬಂಟ್ವಾಳ ಮತ್ತಿತರೆಡೆಗಳಿಂದ ಸಾವಿರ ಸಾವಿರ ಹಿಂದು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆಗಾಗಿ ಬರುವವರಿಗಾಗಿ ವಾಹನ ಸೌಲಭ್ಯ ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗಿದೆ.