ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ

ಸಂವಿಧಾನ ಬದಲಿಸುವ ಹೇಳಿಕೆ ನೀಡಿಲ್ಲ; ಹಿಂದೂ ಸಮಾಜವನ್ನು ಹಣಿಯುವ ಪ್ರಯತ್ನ ಎಂದ ಶ್ರೀಗಳು

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹೇಳದೆ ಇದ್ದ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ವಿನಾಕಾರಣ ನನ್ನನ್ನು ವಿವಾದದಲ್ಲಿ ಸಿಲುಕಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಪೇಜಾವರ ಶ್ರೀ ಮನುಸ್ಮೃತಿಯ ಪ್ರತಿಪಾದಕರು. ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ, ಮೇಲು-ಕೀಳು ಭಾವನೆ ಮಾಡುತ್ತಾರೆ ಎಂದೆಲ್ಲ ಟೀಕಿಸಿದ್ದರು. ಈ ಬಗ್ಗೆ ಪೇಜಾವರ ಶ್ರೀ ಸ್ಪಷ್ಟನೆ ನೀಡಿ, ಸಂವಿಧಾನ ಬದಲಿಸಬೇಕೆಂದು ಹೇಳಿಯೇ ಇಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ.

ಸಂತ ಸಮಾವೇಶದ ನಿರ್ಣಯ































 
 

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ. ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ. ನಿರಾಧಾರ ಆರೋಪ ಯುಕ್ತವಲ್ಲ. ಆ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು. ಸಿಎಂ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ.

ವರದಿಗಾರರಿಗೆ ನಾನು ಆಡದೇ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು ಎಂದು ಮಾಧ್ಯಮಗಳ ವಿರುದ್ಧವೂ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ನನ್ನನ್ನು ಯಾಕೆ ಗರಿಯಾಗಿಸುತ್ತಿದ್ದಾರೆ ಎಂಬುದಾಗಿ ಅವರನ್ನೇ ಕೇಳಬೇಕು. ನನ್ನನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಭಾವಿಸಿರಬಹುದು. ಹಿಂದೂ ಸಮಾಜಕ್ಕೆ ಹಲವು ಮುಖಗಳಿವೆ. ಹಿಂದೂ ಸಮಾಜವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆಡಿದ ಮಾತಿಗೆ ವಿರೋಧಿಸಿ, ಅದು ಬಿಟ್ಟು ಆಡದೇ ಇರುವ ಮಾತಿಗೆ ವಿರೋಧ ಯಾಕೆ? ನಾನು ಕಾನೂನು ಹೋರಾಟ ಮಾಡಬಹುದು. ಆದರೆ ನನಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜದ ಎಲ್ಲ ವರ್ಗದ ಜೊತೆ ಪ್ರೀತಿ ಸಹಬಾಳ್ವೆಯಿಂದ ಇದ್ದೇವೆ. ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರ ಮಾಡುತ್ತಿದ್ದೇವೆ. ದಲಿತ ಕೇರಿ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವುದು ಮಾಡುತ್ತಿದ್ದೇವೆ. ಪೇಜಾವರ ಮಠ ಮತ್ತು ಸಂಘ ಸಂಸ್ಥೆಗಳು ದಾನಿಗಳ ಮೂಲಕ ನಿರಂತರ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ 16 ಲಕ್ಷ ರೂ. ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ ಮೂಲಕ ಕೊರಗ ಜನಾಂಗದವರಿಗೆ ಕಟ್ಟಿಸಿಕೊಡಲಾಗಿದೆ. ಒಟ್ಟು ನೂರು ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಅವರು ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಒಂದು ಮತದವರ ಓಲೈಕೆ

ಭಾರತ ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಹಿಂದೂಗಳ ಭಾವನೆಗೆ ಬೆಲೆ ಕೊಡುವ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದು ಹೌದು. ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ. ಸಂವಿಧಾನ ಎಂಬ ಶಬ್ದವನ್ನೇ ಬಳಸಿಲ್ಲ. ಚುನಾಯಿತ ಸರ್ಕಾರಗಳು ಸರ್ವರ ಸರ್ಕಾರ ಆಗಬೇಕು. ಎಲ್ಲ ಪ್ರಜೆಗಳನ್ನು ಏಕರೂಪವಾಗಿ ಕಾಣಬೇಕು. ಕೇಲವ ಒಂದು ಮತದವರನ್ನು ಓಲೈಸುವ ಪ್ರವೃತ್ತಿ ನೋಡುತ್ತಿದ್ದೇವೆ. ಈ ಪ್ರವೃತ್ತಿ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.

10 ಲಕ್ಷ ರೂ. ಅನುದಾನ ಇರುವ ದೇವಾಲಯಗಳಿಗೆ ಶೇ.5 ತೆರಿಗೆ, 1 ಕೋಟಿ ರೂ. ಆದಾಯ ಇರುವ ದೇಗುಲಗಳಿಗೆ ಶೇ.10ರಂತೆ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಸಹಿಗಾಗಿ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅದನ್ನು ವಾಪಸು ಕಳುಹಿಸಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇತರ ಮತೀಯರ ಶ್ರದ್ಧಾ ಕೇಂದ್ರಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ. ಹಿಂದುಗಳ ಶ್ರದ್ಧಾ ಕೇಂದ್ರವನ್ನು ಮುಷ್ಟಿಯಲ್ಲಿ ಇರಿಸುವ ಪ್ರಯತ್ನ ನಡೆಯುತ್ತಿದೆ. ಶಿಥಿಲ ಸ್ಥಿತಿಯಲ್ಲಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಹುಂಡಿಯ ಹಣ ಬಳಸಲು ಸಾಧ್ಯವಾಗುತ್ತಿಲ್ಲ. ಅರ್ಚಕರಿಗೆ ಸರಿಯಾದ ವೇತನ ನೀಡುವುದಿಲ್ಲ. ರಾಜ ಮಹಾರಾಜರ ಕಾಲದ ಭೂಮಿಯನ್ನು ಇನ್ನೂ ಖಾತಾ ಮಾಡಿ ಕೊಟ್ಟಿಲ್ಲ. ದೇಗುಲದ ಭೂಮಿ ಸರಕಾರದ ಭೂಮಿ ಎಂದು ಪರಿಗಣಿಸಿ ನಾನಾ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಂತಹಾ ದ್ವಿಮುಖ ನೀತಿ ಯಾಕೆ? ಯಾವುದೇ ಪಕ್ಷ ಮುಖ್ಯವಲ್ಲ ಹಿಂದುಗಳ ಭಾವನೆಗೆ ಗೌರವ ಕೊಡುವ ಸರ್ಕಾರ ಮುಖ್ಯ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top