ಫುಟ್‌ಬಾಲ್‌ ಪಂದ್ಯಾಟದಲ್ಲಿ ಮಾರಾಮಾರಿ : 100ಕ್ಕೂ ಅಧಿಕ ಮಂದಿ ಸಾವು

ಅಂಪಾಯರ್‌ ತೀರ್ಪಿನಿಂದ ಕೆರಳಿ ಹೊಡೆದಾಡಿಕೊಂಡ ಅಭಿಮಾನಿಗಳು

ಗಿನಿಯ : ಗಿನಿಯಾದ ಎರಡನೇ ದೊಡ್ಡ ನಗರವಾದ ಝೆರೆಕೋರ್‌ ಎಂಬಲ್ಲಿ ಫುಟ್‌ಬಾಲ್‌ ಪಂದ್ಯಾಟವೊಂದರಲ್ಲಿ ಅಭಿಮಾನಿಗಳ ನಡುವೆ ನಡೆದ ಭೀಕರ ಹೊಡೆದಾಟದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾದ ಘಟನೆ ಸಂಭವಿಸಿದೆ. ರೆಫರಿಯ ವಿವಾದಾತ್ಮಕ ತೀರ್ಪೊಂದು ಎರಡು ತಂಡಗಳ ಅಭಿಮಾನಿಗಳ ನಡುವೆ ಹೊಡೆದಾಟಕ್ಕೆ ಕಾರಣವಾಯಿತು. ಸ್ಟೇಡಿಯಂಗಿಳಿದು ಅಭಿಮಾನಿಗಳು ಮಾರಾಮಾರಿ ನಡೆಸಿದ ಪರಿಣಾಮ ರಕ್ತದೋಕುಳಿಯೇ ಹರಿಯಿತು ಎಂದು ವರದಿಗಳು ತಿಳಿಸಿವೆ.

ಸ್ಥಳೀಯ ಆಸ್ಪತ್ರೆಗಳಲ್ಲಿ ಶವಗಳು ರಾಶಿ ಬಿದ್ದಿದ್ದವು. ಶವಾಗಾರಗಳು ತುಂಬಿ ಶವಗಳನ್ನು ಸ್ಥಳ ಇರುವಲ್ಲೆಲ್ಲ ಇಡಲಾಗಿದೆ. ಎಲ್ಲಿ ನೋಡಿದರೂ ಶವಗಳೇ ಕಾಣಿಸುತ್ತಿದ್ದವು ಎಂದು ವೈದ್ಯರೊಬ್ಬರು ಸ್ಥಳೀಯ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.































 
 

ಹೊಡೆದಾಟದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜನರು ಕೈಗೆ ಸಿಕ್ಕಿದ ಕಲ್ಲು, ದೊಣ್ಣೆಗಳಲ್ಲಿ ಬಡಿದಾಡಿಕೊಂಡಿದ್ದಾರೆ. ಜನರು ಎತ್ತರದ ಗೋಡೆ ಹಾರಿ ರಸ್ತೆಗೆ ಜಿಗಿಯುತ್ತಿರುವುದು ಮತ್ತು ಮೈದಾನದಲ್ಲಿ ಅನೇಕ ಶವಗಳು ಬಿದ್ದಿರುವುದು ಕಾಣಿಸುತ್ತಿದೆ. ಉದ್ರಿಕ್ತ ಜನರು ಸ್ಥಳೀಯ ಪೊಲೀಸ್‌ ಠಾಣೆಯನ್ನೂ ದಾಂಧಲೆ ಎಸಗಿ ಧ್ವಂಸಗೈದಿದ್ದಾರೆ.

2021ರ ದಂಗೆಯಲ್ಲಿ ಸರಕಾರವನ್ನು ಕಿತ್ತೆಸೆದು ಅಧ್ಯಕ್ಷರಗಾಗಿ ಸ್ವಯಂ ನೇಮಕಗೊಂಡಿದ್ದ ಮಮದಿ ಡೌಂಬೋಯ ಗೌರವಾರ್ಥ ಫುಟ್‌ಬಾಲ್‌ ಟೂರ್ನಮೆಂಟ್‌ ಆಯೋಜಿಸಲಾಗಿತ್ತು. ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಇಂಥ ಫುಟ್‌ಬಾಲ್‌ ಪಂದ್ಯಾಟಗಳು ನಡೆಯುವುದು ಸಾಮಾನ್ಯ. ಫುಟ್‌ಬಾಲ್‌ ಅಭಿಮಾನಿಗಳ ನಡುವೆ ಹೊಡೆದಾಟವೂ ನಡೆಯುತ್ತಿರುತ್ತದೆ. ಇಂಥ ಹೊಡೆದಾಟವೇ ನಿನ್ನೆ ವಿಕೋಪಕ್ಕೆ ತಿರುಗಿದೆ. ಗಿನಿಯದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸರಕಾರವೇ ನಿನ್ನೆ ನಡೆದ ಫುಟ್‌ಬಾಲ್‌ ಪಂದ್ಯಕ್ಕೆ ಪ್ರೋತ್ಸಾಹ ನೀಡಿತ್ತು ಎನ್ನಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top