ಪುತ್ತೂರು : ಇಲ್ಲಿಯ ಎಸ್.ಡಿ.ಪಿ. ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆಶ್ರಯದಲ್ಲಿ ಪುತ್ತೂರು ಎಸ್ ಡಿಪಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಲಾ ಸಂಭ್ರಮ “ಕಲೋಪಾಸನಾ-2023” ಮಾ.25, 26 ಹಾಗೂ 27 ರಂದು ಪರ್ಲಡ್ಕದಲ್ಲಿರುವ ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ಕಳೆದ 18 ವರ್ಷಗಳಿಂದ ಹಲವಾರು ಅಂತರಾಷ್ಟ್ರೀಯ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಸಂಗೀತ , ಯಕ್ಷಗಾನ ಕಲಾವಿದರನ್ನು ಪರಿಚಯಿಸುವ ಜತೆಗೆ ಫೋಷಿಸುವ ಕೆಲಸ ನಡೆಸಿಕೊಂಡು ಸಂಸ್ಥೆ ಬಂದಿದೆ. ಅದರಂತೆ ಈ ಬಾರಿ 19ನೇ ವರ್ಷದ ಕಲೋಪಾಸನಾ ನಡೆಯಲಿದೆ ಎಂದು ತಿಳಿಸಿದರು.
ಫೆ.25 ರಂದು ಸಂಜೆ 6 ಗಂಟೆಗೆ ಮಂಗಳೂರಿನ ಕಸ್ತೂರ್ಭಾ ಕಾಲೇಜಿನ ಪ್ರೊಫೆಸರ್ ಆಫ್ ಮೆಡಿಸಿನ್ ಡಾ.ಎಂ.ಚಕ್ರಪಾಣಿ ಎಂ.ಡಿ. ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಪದ್ಮಭೂಷಣ, ಸಂಗೀತ ಕಲಾನಿಧಿ ವಿದುಷಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ವಿದ್ವಾನ್ ಎಂಬಾರ್ ಕಣ್ಣನ್ ವಯಲಿನ್, ವಿದ್ವಾನ್ ನೈವೇಲಿ ಎಸ್.ಸ್ಕಂದಸುಬ್ರಹ್ಮಣ್ಯನ್ ಮೃದಂಗ ಹಾಗೂ ವಿದ್ವಾನ್ ಆರ್.ರಮಣ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ಫೆ.26 ಭಾನುವಾರ ಸಂಜೆ 6 ಗಂಟೆಗೆ ಯಕ್ಷಗಾನ ಮಂಡಳಿ ಶ್ರೀ ಪೆರ್ಡೂರು ಮೇಳದವರಿಂದ “ಚಂದ್ರಹಾಸ ಶಶಿಪ್ರಭ” ಹಾಗೂ ಫೆ.27 ಸೋಮವಾರ ಸಂಜೆ 6 ಕ್ಕೆ ಶ್ರೀ ಹನುಮಗಿರಿ ಯಕ್ಷಗಾನ ಮೇಳದವರಿಂದ “ಭಾರತ ಜನನಿ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ರೂಪಲೇಖ ಉಪಸ್ಥಿತರಿದ್ದರು.