ಪುತ್ತೂರು: ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಭಾನುವಾರ ಅನುರಾಗ ವಠಾರದಲ್ಲಿ ನಡೆಯಿತು.
ಡಾ.ಅಂಬಿಕಾ ಕಣಪು ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕಣ್ಣಿನ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ವರ್ಷಕ್ಕೊಮ್ಮೆಯಾದರೂ ಕಣ್ಣಿನ ಪರೀಕ್ಷೆ ಮಾಡಿಸಬೇಕು. ಅದರಲ್ಲೂ ಮಧುಮೇಹ ಇರುವವರು ಕಡ್ಡಾಯವಾಗಿ ಮಾಡಬೇಕು. ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸುವುದರಿಂದ ಮುಂದೆ ಆಗುವ ತೊಂದರೆಯನ್ನು ತಪ್ಪಿಸಬಹುದು ಎಂದರು.
ಕಟ್ಟಡ ಕಾರ್ಮಿಕ ಸಂಘದ ಸಲಹೆಗಾರ, ವಿದ್ಯುತ್ ಕಂಬ ಅಳವಡಿಸುವವರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸದಸ್ಯರಿಗೆ ಹಲವಾರು ಕಾರ್ಯಕ್ರಮಗಳನ್ನು ಅನುರಾಗ ವಠಾರದಲ್ಲಿ ನಡೆಸಲಾಗಿದೆ.
ನವಕರ್ನಾಟಕ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ರಾಜೇಶ್ ಮುಕ್ವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಣ್ಣಿನ ತಪಾಸಣಾ ಶಿಬಿರವನ್ನು ಪ್ರಥಮವಾಗಿ ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಆಚಾರ್ಯ, ಕೋಶಾಧಿಕಾರಿ ಈಶ್ವರ ನಾಯ್ಕ ಉಪಸ್ಥಿತರಿದ್ದರು. ಶಿಬಿರದಲ್ಲಿ 82 ಮಂದಿ ಭಾಗವಹಿಸಿದ್ದರು.
ಪುತ್ತೂರು ರೋಟರಿ ಕ್ಲಬ್,, ಮಂಗಳೂರು ಪ್ರಸಾದ್ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಪಿ.ದಯಾನಂದ ಪೈ ಹಾಗೂ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರು ಸೆಂಚುರಿ ಗ್ರೂಪ್ ಜಂಟಿ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.