ಪುತ್ತೂರು : ಪುತ್ತೂರಿನ ಡಿಸಿಆರ್ ಕೇಂದ್ರದಲ್ಲಿ ಫೆ.13 ರಂದು ಆರಂಭಗೊಂಡ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಾಯೋಜಿತ “ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಪ್ರಾಮುಖ್ಯತೆಯೊಂದಿಗೆ ಸುಧಾರಿತ ಗೇರು ಉತ್ಪಾದಕತಾ ತಂತ್ರಜ್ಞಾನ” ಕುರಿತ ರಾಷ್ಟ್ರಮಟ್ಟದ ತರಭೇತಿ ಕಾರ್ಯಕ್ರಮದ ಸಮಾಪನಾ ಸಮಾರಂಭವು ಸೋಮವಾರ ನಡೆಯಿತು.
ರೋಗಶಾಸ್ತ್ರ ವಿಜ್ಞಾನಿ ಡಾ. ರಾಜಶೇಖರ ಎಂಟು ದಿನಗಳ ಕಾಲ ನಡೆದಂತ ತರಬೇತಿ ಕಾರ್ಯಕ್ರಮದ ಕುರಿತಂತೆ ಸಂಕ್ಷಿಪ್ತ ವಿವರಣೆಯನ್ನು ಸಭೆಗೆ ನೀಡಿದರು.
ಕೀಟಶಾಸ್ತ್ರದ ಪ್ರಧಾನ ವಿಜ್ಞಾನಿ ಡಾ. ಟಿ.ಎನ್.ರವಿಪ್ರಸಾದ್ ಅಭ್ಯರ್ಥಿಗಳಿಗೆ ತರಬೇತಿಯ ಸೂಕ್ತ ಅಳವಡಿಕೆಯ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಚ್ಚಿನ್ ಗೇರು ಮತ್ತು ಕೊಕ್ಕೊ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಎನ್ ಹುಬ್ಬಳ್ಳಿ, ಗೇರು ಹಾಗು ಪುತ್ತೂರಿನ ಗೇರು ನಿರ್ದೇಶನಾಲಯದೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.
ನಿರ್ದೇಶನಾಲಯದ ನಿರ್ದೇಶಕರಾದ ಡಾ.ದಿನಕರ ಅಡಿಗ ಅಧ್ಯಕ್ಷತೆ ವಹಿಸಿ, ಎಂಟು ದಿವಸಗಳ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿ ತರಬೇತಿಯ ಜ್ಞಾನವನ್ನು ಅಳವಡಿಸಿಕೊಳ್ಳುವುದರ ಕುರಿತಂತೆ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮುಖ್ಯಅತಿಥಿ, ಗೇರು ಮತ್ತು ಕೊಕ್ಕೊ ನಿರ್ದೇಶನಾಲಯದ ನಿರ್ದೇಶಕ ಕನ್ನಡಿಗ ಡಾ. ವೆಂಕಟೇಶ್ ಹುಬ್ಬಳ್ಳಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ವಿಜ್ಞಾನಿ ಡಾ.ಕೆ.ವನಿತಾ, ಸ್ವಾಗತಿಸಿದರು. ಡಾ. ರಾಜಶೇಖರ್ ವಂದಿಸಿದರು. ಸಂಸ್ಥೆಯ ವಿಜ್ಞಾನಿ ಡಾ. ವೀಣಾ ಜಿ.ಎಲ್. ಕಾರ್ಯಕ್ರಮ ನಿರ್ವಹಿಸಿದರು.