ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ

ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು

ಶಬರಿಮಲೆ : ಶಬರಿಮಲೆ ಯಾತ್ರಾ ಋತು ಶುರುವಾದ ಬರೀ 12 ದಿನದಲ್ಲೇ ಕ್ಷೇತ್ರದ ಆದಾಯದಲ್ಲಿ 15.89 ಕೋ.ರೂ. ಏರಿಕೆ ಕಂಡುಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವ ಅನೇಕ ಉಪಕ್ರಮಗಳನ್ನು ಕೇರಳದ ದೇವಸ್ವಂ ಬೋರ್ಡ್‌ ಈ ಸಲ ಕೈಗೊಂಡಿರುವುದರಿಂದ ಇಷ್ಟರ ತನಕದ ಯಾತ್ರೆ ಸರಾಗವಾಗಿ ನಡೆದಿದೆ. ಅಂತೆಯೇ ಕ್ಷೇತ್ರದ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ.
ಕಳೆದ ವರ್ಷ ಆರಂಭದ 12 ದಿನಗಳ ಯಾತ್ರೆ ಸಂದರ್ಭದಲ್ಲಿ 47.12 ಕೋ. ರೂ. ಸಂಗ್ರಹವಾಗಿದ್ದರೆ ಇದೇ ಅವಧಿಯಲ್ಲಿ ಈ ವರ್ಷ 63.01 ಕೋ. ರೂ. ಸಂಗ್ರಹವಾಗಿದೆ. ಇದರಲ್ಲಿ ಅರವಣ ಪಾಯಸ ಒಂದರಿಂದಲೇ 28.93 ಕೋ. ರೂ. ಆದಾಯ ಬಂದಿದೆ. ಅಂತೆಯೇ 3.53 ಕೋ. ರೂ. ಅಪ್ಪಂ ಪ್ರಸಾದದಿಂದ ಸಂಗ್ರಹವಾಗಿದೆ.
ಯಾತ್ರಾ ಋತುವಿನ ಮೊದಲ 12 ದಿನಗಳಲ್ಲಿ 9,13,437 ವ್ರತಧಾರಿಗಳು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 5,53,925 ಲಕ್ಷ ಮಂದಿ ಬಂದಿದ್ದರು. ಈ ವರ್ಷ 12 ದಿನಗಳಲ್ಲಿ 3,59,515 ಭಕ್ತರು ಹೆಚ್ಚುವರಿಯಾಗಿ ಬಂದಂತಾಗಿದೆ. ಕಳೆದ ಮಂಗಳವಾರ ಒಂದೇ ದಿನ 87,999 ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದು, ಇದು ವರ್ಷ ಒಂದೇ ದಿನದಲ್ಲಿ ಬಂದ ಭಕ್ತರ ಗರಿಷ್ಠ ಸಂಖ್ಯೆ. ಈ ದಿನ 15,514 ಭಕ್ತರು ಸ್ಪಾಟ್‌ ಬುಕ್ಕಿಂಗ್‌ ಮಾಡಿಕೊಂಡು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇಷ್ಟರ ತನಕದ ಶಬರಿಮಲೆ ಯಾತ್ರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ ಎಂದು ದೇವಸ್ವಂ ಬೋರ್ಡ್‌ ಹೇಳಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top