ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಜಗತ್ತು ಮೌನವಾಗಿರುವುದಕ್ಕೆ ಖಂಡನೆ
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರಕ್ಕೆ ಆರ್ಎಸ್ಎಸ್ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಸರ್ಕಾರ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿದೆ. ಈ ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂದು ಆರ್ಎಸ್ಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಇಸ್ಲಾಮಿಕ್ ಉಗ್ರಗಾಮಿಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದಾಳಿ, ಹತ್ಯೆ, ಲೂಟಿಗಳು ಸೇರಿದಂತೆ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಈ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಇದನ್ನು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ಆರ್ಎಸ್ಎಸ್ ತಿಳಿಸಿದೆ.
ಪ್ರಸ್ತುತ ಬಾಂಗ್ಲಾದೇಶದ ಸರ್ಕಾರ ಮತ್ತು ಅದರ ಏಜೆನ್ಸಿಗಳು ಈ ದಾಳಿಯ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿವೆ. ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಸಮುದಾಯದ ಶಾಂತಿಯುತ ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ. ಹಿಂದೂಗಳು ನಿರಂತರವಾಗಿ ದಬ್ಬಾಳಿಕೆ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಪರವಾಗಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಅನ್ಯಾಯವಾಗಿ ಜೈಲಿನಲ್ಲಿರಿಸಲಾಗಿದೆ. ಹಿಂದೂಗಳ ಹಕ್ಕುಗಳಿಗಾಗಿ ಪ್ರತಿಪಾದಿಸುವ ಧಾರ್ಮಿಕ ಮುಖಂಡನ ಬಂಧನ ನ್ಯಾಯದ ಉಲ್ಲಂಘನೆಯಾಗಿದೆ. ಹಿಂದೂಗಳ ಮೇಲಿನ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಕೃಷ್ಣದಾಸ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬಾಂಗ್ಲಾದೇಶ ಸರ್ಕಾರಕ್ಕೆ ಆರ್ಎಸ್ಎಸ್ ಮನವಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಕಿರುಕುಳವನ್ನು ತಡೆಗಟ್ಟಲು ತನ್ನ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಈ ಕಾರಣಕ್ಕಾಗಿ ಜಾಗತಿಕ ಬೆಂಬಲವನ್ನು ನಿರ್ಮಿಸಲು ತ್ವರಿತ ಕ್ರಮ ಕೈಗೊಳ್ಳಲು ಭಾರತ ಸರ್ಕಾರವನ್ನು ಒತ್ತಾಯಿಸಿದೆ.
ಈ ನಿರ್ಣಾಯಕ ಹಂತದಲ್ಲಿ ಬಾಂಗ್ಲಾದೇಶದ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವಂತೆ ಭಾರತ ಮತ್ತು ಜಾಗತಿಕ ಸಮುದಾಯಕ್ಕೆ ಆರ್ಎಸ್ಎಸ್ ಕರೆ ನೀಡಿದೆ. ವಿಶ್ವಶಾಂತಿ ಮತ್ತು ಸಹೋದರತ್ವದ ಹಿತದೃಷ್ಟಿಯಿಂದ ಈ ದೌರ್ಜನ್ಯಗಳನ್ನು ಕೊನೆಗೊಳಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಸರ್ಕಾರಗಳನ್ನು ಆರ್ಎಸ್ಎಸ್ ಒತ್ತಾಯಿಸಿದೆ.