ನಡುರಾತ್ರಿ ದಟ್ಟ ಕಾಡಿನ ನಡುವೆ ಕಾಣಿಸಿದ ಟಾರ್ಚ್ ಬೆಳಕಿನ ಹಿನ್ನೆಲೆಯಲ್ಲಿ ಅನುಮಾನ
ಕಾರ್ಕಳ : ನಕ್ಸಲರು ಇನ್ನೂ ಕೊಪ್ಪ, ಶೃಂಗೇರಿ ಭಾಗದಲ್ಲೇ ಇರುವ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಶುಕ್ರವಾರ ನಡುರಾತ್ರಿ ವೇಳೆ ಕುದುರೆಮುಖ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಕೆರೆಕಟ್ಟೆ ಪರಿಸರದಲ್ಲಿ ದಟ್ಟ ಕಾಡಿನ ನಡುವೆ ಟಾರ್ಚ್ ಬೆಳಕು ಕಂಡುಬಂದಿದೆ. ಇದು ನಕ್ಸಲರ ಓಡಾಟ ಇರಬಹುದು ಎಂಬ ಅನುಮಾನದಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ತೀವ್ರಗೊಳಿಸಿದೆ.
ಹೆಬ್ರಿಯ ನಾಡ್ಪಾಲು ಸಮೀಪ ಪೀತಬೈಲಿನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್‌ಕೌಂಟರ್ ನಡೆದ ಬಳಿಕ ಉಳಿದಿರುವ ನಕ್ಸಲರಿಗಾಗಿ ತೀವ್ರ ಸೋಧ ನಡೆಯುತ್ತಿದೆ. ನಕ್ಸಲರು ಮರಳಿ ಕೇರಳದತ್ತ ಹೋಗಿರಬಹುದು ಎಂದು ಅನುಮಾನಿಸಲಾಗಿತ್ತು. ಆದರೆ ಈಗ ಕೆರೆಕಟ್ಟೆ ಪರಿಸರದಲ್ಲಿ ಟಾರ್ಚ್ ಬೆಳಕು ಕಂಡಿರುವುದು ಅವರು ಇನ್ನೂ ಕರಾವಳಿಯಲ್ಲೇ ಇರುವ ಅನುಮಾನ ಉಂಟುಮಾಡಿದೆ.
ಕೊಪ್ಪದ ಮುಂಡಗಾರು ಲತಾ ಈಗ ನಕ್ಸಲ್ ತಂಡದ ನಾಯಕಿಯಾಗಿದ್ದಾಳೆ ಎನ್ನಲಾಗುತ್ತಿದೆ. ಅವಳ ತಂಡದಲ್ಲಿ ಕಳಸ ಬಾಳೆಹೊಳೆಯ ವನಜಾಕ್ಷಿ, ಬೆಳ್ತಂಗಡಿ ವೇಣೂರಿನ ಸುಂದರಿ, ರಾಯಚೂರಿನ ಜಯಣ್ಣ, ಶೃಂಗೇರಿ ಹಿತ್ತಲಮನೆಯ ರವೀಂದ್ರ ಎಂಬವರು ಇದ್ದಾರೆ. ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಸತ್ತ ಬಳಿಕ ಇವರು ದಟ್ಟ ಕಾಡು ಸೇರಿಕೊಂಡಿರುವ ಅನುಮಾನವಿದೆ.
ಒಟ್ಟಾರೆಯಾಗಿ ಈಗ ಇರುವುದು 6-7 ನಕ್ಸಲರು ಮಾತ್ರ. ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಸತ್ತ ಬಳಿಕ ನಕ್ಸಲರು ಅತಂತ್ರರಾಗಿದ್ದಾರೆ. ಬಲಗುಂದಿರುವ ಅವರು ಈಗ ಕಾಡಿನಂಚಿನತ್ತ ಬರುವ ಧೈರ್ಯ ಮಾಡುತ್ತಿಲ್ಲ. ಶಿವಮೊಗ್ಗ, ಕೊಡಗಿನತ್ತ ತೆರಳಿ ಅಲ್ಲಿಂದ ಮುಂದಿನ ಯೋಜನೆ ತಯಾರಿಸುತ್ತಿರಬಹುದು ಎಂಬ ಅನುಮಾನವಿದೆ.