ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ ಶನಿವಾರ ರಾತ್ರಿ ನಡೆಯಿತು.
ದೀಪೋತ್ಸವದ ಅಂಗವಾಗಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಜೆ ಬಲಿ ಉತ್ಸವ ನಡೆದು ಬಳಿಕ ಮಹಾಮಂಗಳಾರತಿ ನಡೆಯಿತು. ಮಹಾಮಂಗಳಾರತಿಯ ದೀಪದಿಂದ ದೇವಸ್ಥಾನ ರಥಬೀದಿ ಸಹಿತ ಒಳಾಂಗಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಿಂದ ಅಚ್ಚುಕಟ್ಟಾಗಿ ಜೋಡಿಸಿಡಲಾದ ಹಣತೆಗೆ ಉರಿಸಲಾಯಿತು. ದೇವಸ್ಥಾನದ ಇಡಿ ವಠಾರ ಹಣತೆಯ ಬೆಳಕಿನಿಂದ ಸೇರಿದ್ದ ಸಾವಿರಾರು ಭಕ್ತಾದಿಗಳಲ್ಲಿ ಭಕ್ತಿಯನ್ನುಂಟು ಮಾಡಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹೊರಾಂಗಣದಲ್ಲಿ ಕುಣಿತ ಭಜನೆ ನಡೆಯಿತು.
ಬಳಿಕ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ಚಂದ್ರ ಮಂಡಲ ಉತ್ಸವ, ಕೆರೆ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರು, ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದರು.