ಪುತ್ತೂರು: ಹೊರ ಜಿಲ್ಲೆಗಳಿಂದ ಬಂದ ಜೆಸಿಬಿ ಮಾಲಕರು, ಆಪರೇಟರ್ ಗಳು ಹಾಗೂ ಸ್ಥಳೀಯ ಜೆಸಿಬಿ ಮಾಲಕರ ನಡುವೆ ಗೊಂದಲವಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಸಂಜೆಯೊಳಗೆ ಸಭೆ ಕರೆದು ಗೊಂದಲ ಪರಿಹರಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ಜೆಸಿಬಿ, ಹಿಟಾಚಿ ಮಾಲಕರ ಅಸೋಸಿಯೇಶನ್‍ನವರು ಈ ಕುರಿತು ಶುಕ್ರವಾರ ಶಾಸಕರಿಗೆ ಮನವಿ ನೀಡಿ, ಇದಕ್ಕೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮೊದಲಿಗೆ ಜೆಸಿಬಿ ಮಾಲಕರ ಅಸೋಸಿಯೇಶನ್ ನವರು ಈ ಕುರಿತು ಚರ್ಚಿಸಿ ಒಂದು ದರ ನಿಗದಿ ಮಾಡಿ. ಬಳಿಕ ಸೋಮವಾರ ಸಂಜೆಯೊಳಗೆ ಹೊರ ಜಿಲ್ಲೆಯ ಜೆಸಿಬಿ ಮಾಲಕರು, ಆಪರೇಟರ್ ಹಾಗೂ ಸ್ಥಳೀಯ ತಾಲೂಕಿನ ಅಸೋಸಿಯೇಶನ್ ನವರನ್ನು ಸೇರಿಸಿ ಗೊಂದಲಕ್ಕೆ ಪರಿಹಾರ ನೀಡುವ. ಒಟ್ಟಾರೆಯಾಗಿ ಎರಡೂ ಕಡೆಯವರಿಗೆ ಯಾವುದೇ ಅನ್ಯಾಯ ಆಗಬಾರದು ಎಂದು ತಿಳಿಸಿದರು.
ಅಸೋಸಿಯೇಶನ್ ನ ಸುಳ್ಯದ ಗೌರವ ಸಲಹೆಗಾರ ದಿನೇಶ್ ಮಾತನಾಡಿ, ಕಳೆದ 10-15 ವರ್ಷಗಳಿಂದ ಹೊರ ಜಿಲ್ಲೆಯಿಂದ ಬಂದು ಇಲ್ಲಿ ಸೆಟ್ಲ್ ಆದ ಜೆಸಿಬಿ ಮಾಲಕರಿಗೆ ನಾವು ಯಾವುದೇ ತೊಂದರೆ ಮಾಡಿಲ್ಲ. ಅವರು ಕೆಲಸ ಮಾಡಬಹುದು. ಇತ್ತೀಚೆಗೆ ಅಂದರೆ 15 ದಿನ, ಒಂದು ತಿಂಗಳಿನಿಂದೀಚೆಗೆ ಬಂದು ಇಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು. ಈ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ಗುರುವಾರ ಸಭೆ ಕರೆದು ನಮ್ಮನ್ನು ಷಂಡರು ಎಂದು ಹೇಳಿದ್ದಾರೆ. ಇದನ್ನು ನಾವು ಒಕ್ಕೋರಲಿನಿಂದ ಖಂಡಿಸುತ್ತೇವೆ. ಈ ಕುರಿತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾವು ಅವರಿಗೆ ಸದ್ಭುದ್ದಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಒಟ್ಟಾರೆಯಾಗಿ ಸ್ಥಳೀಯ ಜೆಸಿಬಿ ಮಾಲಕರು, ಆಪರೇಟರ್ ಗಳಿಗೆ ಹೆಚ್ಚಿನ ಅವಕಾಶ, ಮೊದಲ ಆದ್ಯತೆ ಸಿಗಬೇಕು ಎಂಬುದು ನಮ್ಮ ಬೇಡಿಕೆ ಎಂದು ತಿಳಿಸಿದರು. ಈ ಕುರಿತು ವಿವಿಧ ಪಕ್ಷದ ಮುಖಂಡರುಗಳಿಗೆ ನಾವು ಮನವಿ ನೀಡಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮಗೆ ನ್ಯಾಯ ಕೊಡಿಸಬೇಕು, ಗೊಂದಲಗಳನ್ನು ಪರಿಹರಿಸಬೇಕು ಎಂದು ಸುಳ್ಯ, ಪುತ್ತೂರು, ಬಂಟ್ವಾಳ, ಕಡಬ ಜೆಸಿಬಿ ಮಾಲಕರು, ಆಪರೇಟ್ ಗಳು ಶಾಸಕರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ಜೆಸಿಬಿ ಮಾಲಕರ ಸಂಘದ ಅಧ್ಯಕ್ಷ ಪದ್ಮನಾಭ, ಪುತ್ತೂರು ಅಧ್ಯಕ್ಷ ಜಯಂತ ಬೆತ್ತೋಡಿ, ಉಪಾಧ್ಯಕ್ಷ ಮಿಥುನ್, ಬಂಟ್ವಾಳ ಅಧ್ಯಕ್ಷ ರಂಜಿತ್ ರಾವ್, ಕಡಬ ಅಧ್ಯಕ್ಷ ಮನಮೋಹನ್ ರೈ, ಸುಪ್ರಿತ್ ಕೊಯಿಲ ಮತ್ತಿತರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.