ಬಾರ್ ಲೈಸೆನ್ಸ್ ನೀಡಲು ನಡೆದ ಲಂಚದ ಮಾತುಕತೆಯಲ್ಲಿ ಸಚಿವರ ಹೆಸರು ಉಲ್ಲೇಖ
ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತೊಂದು ಲಂಚದ ಸುಳಿಯಲ್ಲಿ ಸಿಲುಕಿದ್ದಾರೆ. ಬಾರ್ ಲೈಸೆನ್ಸ್ ನೀಡಲು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಂದಲೇ ಅಬಕಾರಿ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿದ ಪ್ರಕರಣದಲ್ಲಿ ಮಂಡ್ಯದ ಉಸ್ತುವಾರಿ ಸಚಿವರೂ ಆಗಿರುವ ಚಲುವರಾಯಸ್ವಾಮಿಯ ಹೆಸರೂ ಪ್ರಸ್ತಾಗೊಂಡಿದ್ದು, ಈಗ ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಮಂಡ್ಯದ ಚಂದೂಪುರದಲ್ಲಿ ಬಾರ್‌ಗೆ ಲೈಸೆನ್ಸ್ ನೀಡಲು ಲಂಚ ಕೇಳಿದ ಪ್ರಕರಣ ಸಂಬಂಧ ನೀಡಲಾಗಿರುವ ದೂರಿನ ಜತೆ ಸಲ್ಲಿಕೆಯಾಗಿರುವ ಆಡಿಯೊ ಮತ್ತು ವೀಡಿಯೊ ಸಾಕ್ಷ್ಯದ ಸತ್ಯಾಸತ್ಯತೆ ಅರಿಯಲು ಎಫ್ಐಆರ್ ದಾಖಲಿಸುವ ಮುನ್ನವೇ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಂದು ವೇಳೆ ಎಫ್ಐಆರ್ ದಾಖಲಾದರೆ ಚಲುವರಾಯಸ್ವಾಮಿಗೆ ಸಂಕಷ್ಟ ಎದುರಾಗಲಿದೆ. ದೂರು ನೀಡಿದವರು ಸಲ್ಲಿಸಿರುವ ಆಡಿಯೋ ಸಂಭಾಷಣೆಯಲ್ಲಿ ಸಚಿವ ಚಲುವರಾಯಸ್ವಾಮಿ ಹೆಸರು ಪ್ರಸ್ತಾಪವಾಗಿದೆ. ಅಧಿಕಾರಿ ಮತ್ತು ದೂರುದಾರನ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯಲ್ಲಿ ಸಚಿವರ ಬಗ್ಗೆ ಹಲವು ಸಲ ಪ್ರಸ್ತಾಪ ಮಾಡಲಾಗಿದೆ. ಲಂಚದಲಿ ಸಚಿವರಿಗೂ ಪಾಲು ಕೊಡಬೇಕೆಂಬ ಅರ್ಥದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಈ ವಿಚಾರ ಬಯಲಾದ ಬೆನ್ನಿಗೆ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಬಾರ್ ಲೈಸೆನ್ಸ್ನಲ್ಲಿಯೂ ಲಂಚ ವಸೂಲಿ ನಡೆಯುತ್ತಿದೆ. ಸಚಿವರ ಮುಂದಾಳತ್ವದಲ್ಲೇ ಅಧಿಕಾರಿಗಳು ರೇಟ್ ಫಿಕ್ಸ್ ಮಾಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಸಚಿವರಿಗೂ ಪಾಲು ಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಆರೋಪಿಸಿದೆ.
ಕಾಂಗ್ರೆಸ್ ಕಾರ್ಯಕರ್ತ ಪುನೀತ್ ನೀಡಿರುವ ಸಾಕ್ಷ್ಯಗಳ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿ ಡಿಐಜಿಗೆ ವರದಿ ಸಲ್ಲಿಸಲಿದ್ದಾರೆ. ಒಂದು ವೇಳೆ ಲೋಕಾಯುಕ್ತ ಡಿಐಜಿ ಆದೇಶ ನೀಡಿದರೆ ಎಫ್ಐಆರ್ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶಬಾಬು ಮಾಹಿತಿ ನೀಡಿದ್ದಾರೆ.
ಆರೋಪ ಹೊತ್ತ ಅಬಕಾರಿ ಅಧಿಕಾರಿಗಳ ತಲೆದಂಡಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಅಬಕಾರಿ ಇನ್ಸ್ಪೆಕ್ಟರ್ ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ.
ಮಂಡ್ಯದ ಚಂದೂಪುರದಲ್ಲಿ ಬಾರ್‌ಗೆ ಲೈಸೆನ್ಸ್ ಪಡೆಯಲು ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿ ಪುನೀತ್ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರ ಅವರು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿದ್ದರು. ಆಗ ಅಬಕಾರಿ ಇಲಾಖೆ ಅಧಿಕಾರಿಗಳು 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ನಂತರ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಕೆ ಮಾಡಲಾಗಿತ್ತು. ಈ ಎಲ್ಲ ವ್ಯವಹಾರವನ್ನು ಪುನೀತ್ ಆಡಿಯೊ, ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಲಂಚ ಕೇಳಿದ ಅಬಕಾರಿ ಡಿಸಿ ರವಿಶಂಕರ್ ಹಾಗೂ ಇನ್ಸ್ಪೆಕ್ಟರ್ ಶಿವಶಂಕರ್ ವಿರುದ್ಧ ಪುನೀತ್ ಲೋಕಾಯುಕ್ತಕ್ಕೆ ಗುರುವಾರ ದೂರು ನೀಡಿ ಆಡಿಯೊ ಸಾಕ್ಷ್ಯವನ್ನೂ ಸಲ್ಲಿಸಿದ್ದರು. ಈ ಪ್ರಕರಣ ಈಗ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಲಂಚ ಪಡೆಯಲು ಯಾವುದೇ ತಾರತಮ್ಯ ಮಾಡುವುದಿಲ್ಲ, ತನ್ನ ಕಾರ್ಯಕರ್ತರಿಂದಲೂ ಲಂಚ ಕೇಳುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.