ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಷ್ಟೇ ಅನುಮತಿ
ಬೆಂಗಳೂರು: ಸದ್ಯಕ್ಕೆ ಸಂಪುಟ ಪುನರ್ ರಚನೆ ಬೇಡ ಎಂದು ಹೈಕಮಾಂಡ್ ಹೇಳಿರುವುದರಿಂದ ಮಂತ್ರಿಯಾಗಲು ಕಾಯುತ್ತಿದ್ದವರಿಗೆ ಭಾರಿ ನಿರಾಶೆಯಾಗಿದೆ. ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಹೈಕಮಾಂಡ್ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ದಿಲ್ಲಿಗೆ ಹೋಗಿದ್ದರು. ಈ ಮಾತುಕತೆಯಲ್ಲಿ ಹೈಕಮಾಂಡ್ ನಾಯಕರು ಸಂಪುಟ ಪುನರ್ ರಚನೆ ಈಗ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಹಂತದಲ್ಲಿ ಸಂಪುಟ ಪುನರ್ ರಚನೆ ಮಾಡಿದರೆ ಅದರಿಂದ ಬೇರೆಯದ್ದೇ ಸಂದೇಶ ಹೋಗಬಹುದು. ಪಕ್ಷದೊಳಗಿನ ಬಣ ಜಗಳ ತಾರಕಕ್ಕೇರಿ ಸಂಘಟನೆಗೆ ಧಕ್ಕೆಯಾಗಬಹುದು ಎಂದು ಕಾರಣಕ್ಕೆ ಹೈಕಾಂಡ್ ನಾಯಕರು ಪುನರ್ ರಚನೆಗೆ ಅನುಮತಿ ಕೊಟ್ಟಿಲ್ಲ. ಇದರ ಬದಲಾಗಿ ಖಾಲಿ ಇರುವ ಸ್ಥಾನಗಳನ್ನಷ್ಟೇ ಭರ್ತಿ ಮಾಡಿಕೊಳ್ಳಲು ಹೇಳಿದ್ದಾರೆ.
ಸದ್ಯಕ್ಕೆ ಕಾಂಗ್ರೆಸ್ ತುಸು ಗಟ್ಟಿ ಎಂದು ಇರುವುದು ಕರ್ನಾಟಕದಲ್ಲಿ ಮಾತ್ರ. ಹರ್ಯಾಣ ಮತ್ತು ಮಹಾರಾಷ್ಟ್ರದ ಹೀನಾಯ ಸೋಲು ಕಾಂಗ್ರೆಸ್ಸನ್ನು ಸಂಪೂರ್ಣ ಕಂಗೆಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ತುಸು ನೆಲೆ ಗಟ್ಟಿಯಾಗಿರುವ ಕರ್ನಾಟಕದಲ್ಲೂ ಆಂತರಿಕ ಕಚ್ಚಾಟಕ್ಕೆ ಅವಕಾಶ ಮಾಡಿಕೊಟ್ಟು ಪಕ್ಷ ದುರ್ಬಲವಾಗುವುದು ಬೇಡ ಎಂಬ ಕಾರಣವನ್ನು ಹೈಕಮಾಂಡ್ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಉಪಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಕಾಂಗ್ರೆಸ್ ಕ್ಲೀನ್ಸ್ವೀಪ್ ಮಾಡಿದ ಬಳಿಕ ಸಂಪುಟ ಪುನರ್ ರಚನೆ ವಿಚಾರ ಮುನ್ನೆಲೆಗೆ ಬಂದಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ವದಂತಿಗಳೂ ಹರಿದಾಡಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ನಾಯಕರು ಮಾತನಾಡಿದ್ದರು. ಸಚಿವಕಾಂಕ್ಷಿಗಳು ಕೂಡ ಲಾಬಿ ಶುರು ಮಾಡಿದ್ದರು. ಆದರೆ ಸಂಪುಟ ಪುನರ್ ರಚನೆ ಆಗುತ್ತದೆ ಎಂದು ಆಸೆ ಕಂಗಳಿಂದ ಕಾಯುತ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣೀರು ಎರಚಿದೆ.
ಕನಿಷ್ಠ 12-13 ಶಾಸಕರು ಸಚಿವರಾಗಲು ಕಾಯುತ್ತಿದ್ದಾರೆ. ಹೀಗಿರುವಾಗ 3-4 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಅಸಮಾಧಾನ ಸ್ಫೋಟಗೊಳ್ಳುವುದು ಖಂಡಿತ. ಜೊತೆಗೆ ಸಂಪುಟದಿಂದ ಕೈಬಿಟ್ಟವರು ಕೂಡ ಬಂಡೇಳುವ ಸಾಧ್ಯತೆ ಇರುವುದರಿಂದ ಸದ್ಯ ಯಥಾಸ್ಥಿತಿ ಮುಂದುವರಿಯಲಿ ಎಂದು ಹೈಕಮಾಂಡ್ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಸಂಪುಟ ಪುನರ್ ರಚನೆಗೆ ಸದ್ಯದ ಪರಿಸ್ಥಿತಿ ಪಕ್ವವಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಹಸಿರು ನಿಶಾನೆ ತೋರಿದೆ. ಬಿ. ನಾಗೇಂದ್ರರಿಂದ ತೆರವಾದ ಸ್ಥಾನಕ್ಕೆ ಭರ್ತಿಗೆ ಸೂಚಿಸಲಾಗಿದೆ. ಕೆಲವು ಸಚಿವರು ತಮ್ಮ ಖಾತೆ ನಿಭಾಯಿಸಲು ವಿಫಲರಾಗಿದ್ದು, ಅಂತಹ ಸಚಿವರ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಿರುತ್ಸಾಹ ತೋರಿದೆ. ಈಗ ಸ್ಥಾನ ಬದಲಾಯಿಸಿದರೆ ತಪ್ಪು ಸಂದೇಶ ರವಾನೆ ಸಾಧ್ಯತೆ ಇದೆ ಎಂಬುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.