ಪುತ್ತೂರು: 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತಗೊಂಡ ಗ್ರಾಮಜನ್ಯ ರೈತ ಉತ್ಪಾದಕರ ಸಂಸ್ಥೆಯ ನೂತನ ಲೋಗೋ ನ.28ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಅನಾವರಣಗೊಳಿಸಲಾಯಿತು.
ಲೋಗೋ ಅನಾವರಣಕ್ಕೂ ಮುಂಚಿತವಾಗಿ ಸಂಸ್ಥೆಯ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೃಹತ್ ಕಲ್ಪನೆ ಇಟ್ಟುಕೊಂಡಿದ್ದೇವೆ. ಸಣ್ಣ ಹೆಜ್ಜೆ ಈಗಷ್ಟೆ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದ ಜೇನು ಸಂಸ್ಕರಣಾ ಘಟಕ ಅತಿ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಸಮಾನ ಮನಸ್ಕ ರೈತರ ಸಂಪೂರ್ಣ ಸಹಕಾರ ಸಹಭಾಗಿತ್ವದೊಂದಿಗೆ ಮುನ್ನಡೆಯುತ್ತಿರುವ ಗ್ರಾಮಜನ್ಯ ಒಂದು ಸಂಸ್ಥೆಯಾಗಿರದೆ ಪರಿಸರ ಮತ್ತು ಸಮುದಾಯದೊಂದಿಗೆ ಸಹಕಾರ ಹಾಗು ಪರಸ್ಪರ ಸಂಪರ್ಕವಿಟ್ಟುಕೊಂಡು ಕೆಲಸ ನಿರ್ವಹಿಸಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಗುತ್ತಿಗೆ ಆಧಾರಿತ ಜೇನು ಸಾಕಾಣಿಕೆಯನ್ನು ಮೊದಲು ಆರಂಭಿಸಿದ ಸಂಸ್ಥೆ ಗ್ರಾಮಜನ್ಯ. ಈ ಉಪಕ್ರಮವು ಜೇನುಸಾಕಣೆಯನ್ನು ಉತ್ತೇಜಿಸುವುದಲ್ಲದೆ ಜೇನು ಮತ್ತು ಅದರ ಉಪ ಉತ್ಪನ್ನಗಳ ಉತ್ಪಾದನೆಯ ಮೂಲಕ ರೈತರಿಗೆ ಆದಾಯವನ್ನು ಸೃಷ್ಟಿಸುತ್ತದೆ. ಸುಮಾರು 25 ಬಗೆಯ ಕೇಂದ್ರದಿಂದ ಸುಮಾರು ರೂ. 2.22 ಕೋಟಿ ಅನುದಾನದಿಂದ ನ್ಯಾಷನಲ್ ಬಿ ಬೋರ್ಡ್ ಮತ್ತು ಸಣ್ಣ ರೈತರ ವ್ಯಾಪಾರ ನೆರವಿನೊಂದಿಗೆ ಸಂಸ್ಥೆಯು ದಿನಕ್ಕೆ 15 ಮೆಟ್ರಿಕ್ ಟನ್ ಸಾಮರ್ಥ್ಯದ ದೊಡ್ಡ ಅಂತರಾಷ್ಟ್ರೀಯ ಮಟ್ಟದ ಜೇನು ಸಂಸ್ಕರಣಾ ಘಟಕವನ್ನು ನಿರ್ಮಾಣವಾಗಿದೆ. ಅಲ್ಲಿ ಸುಸಜ್ಜಿತ ಪ್ರಯೋಗಾಲಯ ಮತ್ತು ಪ್ಯಾಕಿಂಗ್ ಘಟಕವನ್ನು ಅಳವಡಿಸಲಾಗುತ್ತದೆ. ಇನ್ನು ಒಂದು ತಿಂಗಳೊಳಗೆ ಘಟಕದ ಉದ್ಘಾಟನೆ ನಡೆಯಲಿದೆ. ಉತ್ಪನ್ನಗಳನ್ನು ಜೇನಿಂದ ತಯಾರಿಸಲಾಗುತ್ತದೆ ಎಂದು ಹೇಳಿದರು.
ಜೇನು ಸಾಕಣೆಯ ಜೊತೆಗೆ ಸಂಸ್ಥೆಯು ಹಲಸು ಕೃಷಿ ಮತ್ತು ಬಿದಿರು ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ವರ್ಷ 40 ಮೆಟ್ರಿಕ್ ಟನ್ಹಲಸನ್ನು ಖರೀದಿಸಿ ಮೌಲ್ಯವರ್ಧಿಸಲಾಗಿದೆ. ಈ ವರ್ಷ ಬಿದಿರು ಕೃಷಿಯತ್ತ ಗಮನ ಹರಿಸಲಾಗಿದ್ದು, ರೈತರಿಗೆ ಹೆಚ್ಚುವರಿ ಆದಾಯವನ್ನು ಒದಗಿಸಬಹುದು. ಸಂಸ್ಥೆಯು ರೈತರಿಗೆ 10ಸಾವಿರ ಸಸಿಗಳನ್ನು ವಿತರಿಸಿದೆ ಮತ್ತು 30 ಎಕ್ರೆ ಬಿದಿರು ತೋಟ ನಿರ್ವಹಣೆಗೆ ಅಗತ್ಯವಾದ ಬೆಂಬಲವನ್ನು ನೀಡುತ್ತಿದೆ. ಬಿದಿರು ಕೃಷಿಗೆ ಸಿಎಸ್ಆರ್ ಅನುದಾನವೂ ಲಭ್ಯವಾಗುತ್ತದೆ ಎಂದು ಹೇಳಿದರು.
ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಹೊಸ ಲೋಗೋ ಅನಾವರಣವನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಆನಾವರಣಗೊಳಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಲೋಗೋ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ದೂರದೃಷ್ಟಿತ್ವದಿಂದ ಯೋಜನೆಯಾಗಿ ಮೂಡಿದ ಬಂದ ವ್ಯವಸ್ಥೆಯ ಅಡಿಯಲ್ಲಿ ಕೃಷಿಕರ ಸರ್ವೋತೊಮುಖ ಅಭಿವೃದ್ಧಿಗಾಗಿ ಗ್ರಾಮಜನ್ಯ ಸಂಸ್ಥೆ ಪ್ರಾರಂಭಗೊಂಡಿದೆ. ಈ ಸಂಸ್ಥೆಯಿಂದ ನಮ್ಮೂರಿನ ಕೃಷಿಕರಿಗೆ ಹೆಚ್ಚಿನ ಪ್ರಯೋಜನವಾಗಲಿ ಎಂದರು.
ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ನಿರಂಜನ್ ಪೋಳ್ಯ,ರಾಮ್ ಪ್ರತೀಕ್ ಕರಿಯಲು, ಶ್ರೀಹರ್ಷ, ಶ್ರೀನಂದನ್ ಕೆ,ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.