ಇ.ಡಿ.ದಾಳಿಯ ಬೆದರಿಕೆಯೊಡ್ಡಿ ಹೆಂಡತಿ ಹೆಸರಿಗೆ ಐಪಿಎಲ್‌ ಷೇರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ ಶಶಿ ತರೂರು

ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಬಹಿರಂಗಪಡಿಸಿದ ಮಾಹಿತಿಯಿಂದ ಕೋಲಾಹಲ

ಹೊಸದಿಲ್ಲಿ : ಐಪಿಎಲ್‌ ಫ್ರಾಂಚೈಸಿ ಕುರಿತಾಗಿ ಬಹಳ ವರ್ಷಗಳ ಬಳಿಕ ಬಹಿರಂಗವಾದ ವಿಚಾರವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷ ಪರಾರಿಯಾಗಿ ವಿದೇಶದಲ್ಲಿರುವ ಲಲಿತ್ ಮೋದಿ ಕಾಂಗ್ರೆಸ್‌ ಸಂಸದ ಶಶಿ ತರೂರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಶಶಿ ತರೂರ್ ಅವರ ಪತ್ನಿ ದಿವಂಗತ ಸುನಂದಾ ಪುಷ್ಕರ್ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳದಲ್ಲಿ ಶೇ.25ರಷ್ಟು ಷೇರುಗಳನ್ನು ಅಕ್ರಮವಾಗಿ ಪಡೆದಿದುಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಿದ ನನಗೆ ಇ.ಡಿ ಕಡೆಯಿಂದ ದಾಳಿ ಮಾಡಿಸುವುದಾಗಿ ಶಶಿ ತರೂರ್ ಬೆದರಿಕೆಯೊಡ್ಡಿದ್ದರು ಎಂದು ಲಲಿತ್ ಮೋದಿ ಎಂದು ಬಹಿರಂಗಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಇ.ಡಿ., ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ ತಾನು ಅಧಿಕಾರದಲ್ಲಿರುವಾಗ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ವಿರೋಧಿಗಳನ್ನು ಹೆದರಿಸುತ್ತಿತ್ತು ಎಂದು ಈ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಆರೋಪಿಸಿದೆ.































 
 

ಪೋಡ್​​​ಕಾಸ್ಟ್​ವೊಂದರಲ್ಲಿ ಮಾತನಾಡಿದ ಲಲಿತ್ ಮೋದಿ ಐಪಿಎಲ್ ಕುರಿತಾದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕೊಚ್ಚಿ ಟಸ್ಕರ್ಸ್​ ತಂಡದ ಷೇರಿನಲ್ಲಿ ಶೇ.25ರಷ್ಟು ಪಾಲನ್ನು ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್‌ಗೆ ನೀಡಲಾಗಿತ್ತು.

ಕೊಚ್ಚಿ ಟಸ್ಕರ್ಸ್​ ತಂಡದ 50 ಮಿಲಿಯನ್ ಡಾಲರ್ ಒಪ್ಪಂದದಲ್ಲಿ ಸುನಂದಾ ಪುಷ್ಕರ್ ಕೊಡುಗೆ ಶೂನ್ಯ. ಆದರೂ ಅವರಿಗೆ ತಂಡದಲ್ಲಿ ಶೇ.25ರಷ್ಟು ಷೇರುಗಳನ್ನು ಉಚಿತವಾಗಿ ನೀಡಲಾಗಿತ್ತು. ಮತ್ತೊಂದು ಆಘಾತಕಾರಿ ವಿಷಯವೆಂದರೆ ತಂಡದ ಆದಾಯದಲ್ಲೂ ಅವರಿಗೆ ಶೇ.15ರಷ್ಟು ಪಾಲಿತ್ತು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನು ಗಮನಿಸಿದ ನಾನು ಕೊಚ್ಚಿನ ಟಸ್ಕರ್ಸ್ ಫ್ರಾಂಚೈಸಿಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ತಿಳಿಸಿದ್ದೆ. ಈ ವೇಳೆ ಶಶಿ ತರೂರ್ ಕಡೆಯಿಂದ ನನಗೆ ಕರೆ ಬಂತು. ನೀವು ಸಹಿ ಹಾಕದಿರುವಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಹಾಗೆ ಮಾಡಿದರೆ ನಾಳೆ ನಿಮ್ಮ ಮೇಲೆ ಇಡಿ ದಾಳಿ ನಡೆಸುತ್ತೇನೆ. ನಿಮ್ಮನ್ನು ಆದಾಯ ತೆರಿಗೆ ಇಲಾಖೆ ಬಂಧಿಸುತ್ತದೆ. ಅಲ್ಲದೆ ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಶಶಿ ತರೂರ್ ಬೆದರಿಕೆಯೊಡ್ಡಿದ್ದರು. ಆದರೂ ನಾನು ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಯ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ. ಈ ವೇಳೆ ಅಂದಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರಿಂದ ಕರೆ ಬಂದಿದ್ದು, 10 ಜನಪಥ್‌ನಿಂದ (ಸೋನಿಯಾ ಗಾಂಧಿ ನಿವಾಸ) ಕರೆಗಳು ಬರುತ್ತಿರುವುದರಿಂದ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿಕೊಂಡರು. ಹಾಗಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಲಲಿತ್ ಮೋದಿಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಹಾಲಿ ಸಂಸದ ತಶಿ ತರೂರ್ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದೆ.

2010ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಐಪಿಎಲ್​​ಗೆ ಸೇರಿಕೊಂಡಿತ್ತು. ಆದರೆ ಮರುವರ್ಷವೇ ಅದನ್ನು ವಿಸರ್ಜಿಸಲಾಯಿತು. ಇದಕ್ಕೆ ಮುಖ್ಯ ಕಾರಣ ಲಲಿತ್ ಮೋದಿ ಎಂದು ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಆರೋಪಿಸಿತ್ತು. ಲಲಿತ್ ಮೋದಿ ಕಿರುಕುಳ ನೀಡುತ್ತಿದ್ದಾರೆ ಎಂದು ಕೊಚ್ಚಿ ಟಸ್ಕರ್ಸ್ ಆಡಳಿತ ಮಂಡಳಿ ಬಿಸಿಸಿಐಗೆ ದೂರು ನೀಡಿತ್ತು. ಹೀಗಾಗಿ ಟೂರ್ನಿಯಿಂದ ತಂಡವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿತ್ತು. ಕೊಚ್ಚಿ ತಂಡದ ಈ ದೂರಿನ ನಂತರ, ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ಸೇರಿದಂತೆ 22 ಆರೋಪಗಳ ಮೇಲೆ ಲಲಿತ್ ಮೋದಿ ಅವರನ್ನು ಬಿಸಿಸಿಐ ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಯಿತು. ಈ ಆರೋಪದ ಬೆನ್ನಲ್ಲೇ ಭಾರತದಿಂದ ಪಲಾಯನಗೈದ ಲಲಿತ್ ಮೋದಿ ಇದೀಗ ಲಂಡನ್​​ನಲ್ಲಿ ಇದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top