ಹಿಂದೂ ವಿರೋಧಿ ದೇಶದ ಆಟಗಾರರಿಗೆ ಸದ್ದಿಲ್ಲದೆ ಪಂಚ್ ಕೊಟ್ಟ ಕೇಂದ್ರ ಸರ್ಕಾರ
ಹೊಸದಿಲ್ಲಿ : ಐಪಿಎಲ್ ತಂಡಗಳಿಗೆ ಆಟಗಾರರನ್ನು ಖರೀದಿಸುವ ಮೆಗಾ ಹರಾಜು ಪ್ರಕ್ರಿಯೆ ಜೆಡ್ಡಾದಲ್ಲಿ ನಡೆದಿದ್ದು, ಎಲ್ಲ ತಂಡಗಳು ತಮಗೆ ಬೇಕಾದ ಆಟಗಾರರನ್ನು ಕೋಟಿ ಕೋಟಿ ಸುರಿದು ಖರೀದಿಸಿವೆ. ಆದರೆ ಈ ನಡುವೆ ಬಂಗ್ಲಾದೇಶದ ಯಾವೊಬ್ಬ ಆಟಗಾರನನ್ನು ಯಾರೂ ಖರೀದಿಸಿಲ್ಲ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 574 ಆಟಗಾರರನ್ನು ಹರಾಜಿನಲ್ಲಿ ಆಯ್ಕೆ ಮಾಡಲಾಗಿದ್ದು, ನಂತರ 3 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಮೆಗಾ ಹರಾಜಿಗೆ 577 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಹರಾಜು ಪಟ್ಟಿಯಲ್ಲಿ 12 ಆಟಗಾರರು ಭಾರತದ ನೆರೆಯ ಬಾಂಗ್ಲಾದೇಶದವರೂ ಆಗಿದ್ದರು. ಆದರೆ ಈ ಬಾರಿ ಯಾವುದೇ ಬಾಂಗ್ಲಾದೇಶದ ಕ್ರಿಕೆಟಿಗರು ಹರಾಜಿನಲ್ಲಿ ಮಾರಾಟವಾಗಲಿಲ್ಲ. ಯಾವ ತಂಡವೂ ಬಾಂಗ್ಲಾದೇಶದ ಆಟಗಾರರನ್ನು ಏಕೆ ಖರೀದಿಸಲಿಲ್ಲ? ಎಂಬ ವಿಚಾರ ಈಗ ಬಹಳ ಚರ್ಚೆಯಾಗುತ್ತಿದೆ.
ಇದು ಹಿಂದು ವಿರೋಧಿ ಬಾಂಗ್ಲಾದೇಶಕ್ಕೆ ಭಾರತೀಯರು ಕೊಟ್ಟ ಪಂಚ್ ಎನ್ನಲಾಗಿದೆ. ಸದಾ ಭಾರತ ವಿರೋಧಿ ಭಾವನೆಯಿಂದ ಕುದಿಯುತ್ತಿರುವ ನೆರೆಯ ಪಾಕಿಸ್ಥಾನದ ಕ್ರಿಕೆಟಿಗರಿಗೂ ಐಪಿಎಲ್ ಆಡಲು ಅವಕಾಶ ಕೊಡುವುದಿಲ್ಲ. ಈಗ ಬಾಂಗ್ಲಾದೇಶದತ್ತಲೂ ಇದೇ ತಂತ್ರ ಅನುಸರಿಸರಿಸಲಾಗಿದೆ. ಮೂರು ತಿಂಗಳಲ್ಲಿ ಸಿಗುವ ಕೋಟಿ ಕೋಟಿ ಸಂಭಾವನೆ ಕಳೆದುಕೊಂಡಿರುವ ಬಾಂಗ್ಲಾದೇಶದ ಕ್ರಿಕೆಟಿಗರು ಈಗ ಪರಿತಪಿಸುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಹರಾಜನ್ನು ಗಮನಿಸಿದರೆ ಮುಂಬಯಿ ಇಂಡಿಯನ್ಸ್ ಯಾರಿಗೂ ಪರಿಚಯವಿಲ್ಲದ ಆಟಗಾರನನ್ನು ಆಯ್ಕೆ ಮಾಡಿದೆ. ನ್ಯೂಜಿಲ್ಯಾಂಡ್ನ ಸೂಪರ್ ಸ್ಮ್ಯಾಶ್ನಲ್ಲಿ ಆಡಿದ ಹೊರತಾಗಿ ಯಾವುದೇ ಫ್ರಾಂಚೈಸಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಅನುಭವವಿಲ್ಲದ ನ್ಯೂಜಿಲ್ಯಾಂಡ್ನ ಅನ್ಕ್ಯಾಪ್ಡ್ ಆಟಗಾರ ಬೆವನ್ ಜೇಕಬ್ಸ್ ಅವರನ್ನು ಮುಂಬಯಿ 30 ಲಕ್ಷಕ್ಕೆ ಖರೀದಿಸಿದೆ. ಆದರೂ ಬಾಂಗ್ಲಾದೇಶದ ಆಟಗಾರನನ್ನು ಹರಾಜು ಕೂಗಲು ಯಾವುದೇ ತಂಡ ಧೈರ್ಯ ಮಾಡಿಲ್ಲ.
ಬಾಂಗ್ಲಾದೇಶದ ಆಟಗಾರರು ತಮ್ಮ ಮೊನಚನ್ನು ಬಹುತೇಕ ಕಳೆದುಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಲೀಗ್ ಕ್ರಿಕೆಟ್ನಲ್ಲಿ ಯಾವುದೇ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಐಪಿಎಲ್ ತಂಡ ಅವರನ್ನು ಬಿಡ್ ಮಾಡಲಿಲ್ಲ. ಹರಾಜಿನ ಅಂತಿಮ ಪಟ್ಟಿಯಲ್ಲಿ 12 ಆಟಗಾರರು ಇದ್ದರು. ಅವರಲ್ಲಿ ಇಬ್ಬರು ಆಟಗಾರರು ಹರಾಜಿನ ಸುತ್ತಿಗೆ ಬಂದರು. ಇವುಗಳಲ್ಲಿ ಮುಸ್ತಾಫಿಜುರ್ ರೆಹಮಾನ್ ಮತ್ತು ರಿಶಾದ್ ಹುಸೇನ್ ಹೆಸರುಗಳು ಸೇರಿದ್ದವು. ಆದಾಗ್ಯೂ ಇಬ್ಬರೂ ಆಟಗಾರರು ಮಾರಾಟವಾಗದೆ ಉಳಿದರು. ಅದೇ ಸಮಯದಲ್ಲಿ ಐಪಿಎಲ್ನಲ್ಲಿ ಅಫ್ಘಾನಿಸ್ಥಾನದಂತಹ ದೇಶಗಳ ಆಟಗಾರರಿಗೆ ಭಾರಿ ಬೇಡಿಕೆ ಕಂಡುಬಂದಿದೆ.
ಬಾಂಗ್ಲಾದೇಶದ ಆಟಗಾರರು ಆಯ್ಕೆಯಾಗದಿರಲು ಕಾರಣ ಅವರ ಸಾಮರ್ಥ್ಯದ ಕೊರತೆ ಎಂದು ಹೇಳಲಾಗಿದ್ದರೂ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ನಡೆಯುತ್ತಿರುವುದೂ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಬಾಂಗ್ಲಾದೇಶದ ಆಟಗಾರರಿಗೆ ಬಿಡ್ಡಿಂಗ್ನಲ್ಲಿ ಮಹತ್ವ ನೀಡಬಾರದು ಎಂಬ ಸೂಚನೆಯನ್ನು ರವಾನಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂಬ ಕಾರಣದಿಂದ ಪಾಕಿಸ್ಥಾನದ ಯಾವೊಬ್ಬ ಆಟಗಾರನಿಗೂ ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅದೇ ರೀತಿ ಇದೀಗ ಹಿಂದೂಗಳನ್ನು ವಿರೋಧಿಸುತ್ತಿರುವ ಬಾಂಗ್ಲಾದೇಶಕ್ಕೆ ಇದು ಕೇಂದ್ರ ಸರ್ಕಾರ ಪರೋಕ್ಷವಾಗಿ ಪಂಚ್ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ನಾವು ಹರಾಜಿನ ಸುತ್ತಿಗೆ ಬಂದರೂ ನಮ್ಮನ್ನು ಬೇಕೆಂತಲೇ ಖರೀದಿಸಿಲ್ಲ ಎಂದು ಬಾಂಗ್ಲಾದೇಶದ ಆಟಗಾರರು ಅಳಲು ತೊಡಿಕೊಳ್ಳುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ದಮನವಾಗುತ್ತಿರುವಾಗ ಆ ದೇಶದ ಆಟಗಾರರನ್ನು ಕರೆಸಿ ಇಲ್ಲಿ ಆಡಿಸಿ ಕೋಟಿ ಕೋಟಿ ಸಂಭಾವನೆ ಕೊಟ್ಟು ಪುರಸ್ಕರಿಸಿದ್ದಾರೆ ವಿನಾಕಾರಣ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ ಎಂಬ ರಾಜಕೀಯ ಕಾರಣಕ್ಕೂ ಕೇಂದ್ರದಿಂದ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸದಿರಲು ಸೂಚನೆ ಹೋಗಿದೆ ಎನ್ನಲಾಗುತ್ತಿದೆ.