ಸಂವೇದನಾ ರಹಿತ ಪೊಲೀಸರಿಗೆ ಕಠಿಣ ತರಬೇತಿಯ ಶಿಕ್ಷೆ
ಶಬರಿಮಲೆ : ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಪರಮ ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಫೋಟೊ ಶೂಟ್ ಮಾಡಿರುವುದು ದೇಶವ್ಯಾಪಿ ಆಕ್ರೋಶದ ಕಿಡಿ ಎಬ್ಬಿಸಿದ್ದು, ಈ 23 ಪೊಲೀಸರನ್ನು ಶಬರಿಮಲೆಯ ಬಂದೋಬಸ್ತಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕಠಿಣ ತರಬೇತಿಗೆ ಕಳುಹಿಸುವ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿದೆ.
ಭಾನುವಾರ ಸನ್ನಿಧಾನದಲ್ಲಿ ಕರ್ತವ್ಯದಲ್ಲಿದ್ದ 30 ಪೊಲೀಸರು ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ನಿಂತು ಫೋಟೊಶೂಟ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೂಡಲೇ ಇದು ಶಬರಿಮಲೆ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಿಂದು ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ಕೇರಳ ಸರಕಾರ ಈ ಪೈಕಿ 23 ಪೊಲೀಸರನ್ನು ಸನ್ನಿಧಾನದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಶಿಸ್ತಕ್ರಮವಾಗಿ ಅವರನ್ನು ಒಂದು ತಿಂಗಳ ಮಟ್ಟಿಗೆ ಕಠಿಣ ತರಬೇತಿಯ ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಿದೆ. ಈ ಶಿಕ್ಷೆಯ ಅವಧಿಯಲ್ಲಿ ಅವರಿಗೆ ಮನೆಗೆ ಹೋಗಲು ಕೂಡ ಅವಕಾಶ ಇರುವುದಿಲ್ಲ.
ಶಬರಿಮಲೆಯ ಹದಿನೆಂಟು ಮೆಟ್ಟಿಲುಗಳು ಪರಮ ಪವಿತ್ರವಾಗಿದ್ದು, ಅವುಗಳನ್ನು ಏರಬೇಕಾದರೆ ಮಾಲೆ ಧರಿಸಿ ಕಟ್ಟುನಿಟ್ಟಿನ ವ್ರತಾಚರಣೆ ಮಾಡಬೇಕಾಗುತ್ತದೆ. ವ್ರತಧಾರಿ ಅಯ್ಯಪ್ಪ ಭಕ್ತರಿಗೆ ಮಾತ್ರ ಈ ಮೆಟ್ಟಿಲುಗಳನ್ನು ಏರಲು ಅವಕಾಶವಿದೆ. ಉಳಿದಂತೆ ಕ್ಷೇತ್ರದ ಅರ್ಚಕರು ಏರುತ್ತಾರೆ. ಆದರೆ ಮೆಟ್ಟಿಲುಗಳನ್ನು ಇಳಿದುಕೊಂಡು ಬರಲು ಅಯ್ಯಪ್ಪ ವ್ರತಧಾರಿಗಳಿಗೂ ಅವಕಾಶ ಇಲ್ಲ. ಆದರೆ ಈ 23 ಪೊಲೀಸರು ಸಂವೇದನಾರಹಿತವಾಗಿ ಗರ್ಭಗುಡಿಗೆ ಬೆನ್ನುಹಾಕಿ ನಿಂತು ನಗುತ್ತಾ ಫೋಟೊಕ್ಕೆ ಫೋಸ್ ಕೊಟ್ಟಿದ್ದಾರೆ. ಯಾವ ಕಾರಣಕ್ಕೂ ಅಯ್ಯಪ್ಪನಿಗೆ ಬೆನ್ನು ಹಾಕಿ ನಿಲ್ಲಬಾರದು ಎಂಬ ನಿಯಮವಿದೆ. ಈ ಕಾರಣಕ್ಕೆ ಕ್ಷೇತ್ರದ ತಂತ್ರಿವರ್ಯರು ಕೂಡ ಹಿಮ್ಮುಖವಾಗಿ ಮೆಟ್ಟಿಲು ಇಳಿದುಕೊಂಡು ಬರುತ್ತಾರೆ.
ಘಟನೆ ವಿವಾದ ಎಬ್ಬಿಸಿದ ಬೆನ್ನಿಗೆ ಕೇರಳದ ಎಡಿಜಿಪಿ ಸಂಬಂಧಿಸಿದವರಿಂದ ವರದಿ ತರಿಸಿಕೊಂಡು ಶಿಸ್ತುಕ್ರಮದ ಶಿಕ್ಷೆಗೆ ಶಿಫಾರಸ್ಸು ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನದ ಪೂಜೆಯ ಬಳಿಕ ಸನ್ನಿಧಾನ ಮುಚ್ಚಿದ ಬಳಿಕ ಪೊಲೀಸರು ಮೆಟ್ಟಿಲುಗಳ ಮೇಲೆ ಫೋಟೊಶೋಟ್ ಮಾಡಿಕೊಂಡಿದ್ದಾರೆ. ಅವರಿಗೆ ಪ್ರಚಾರದ ಲಾಲಸೆ ಬಿಟ್ಟರೆ ಬೇರೆ ದುರುದ್ದೇಶ ಇರಲಿಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.